ರಾಮನಗರ: ಕಾಡಾನೆಯೊಂದು ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿ ತೀವ್ರವಾಗಿ ಪರದಾಡಿರುವ ಹೃದಯವಿದ್ರಾವಕ ಘಟನೆ ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ನಡೆದಿದೆ.
ಅರೆಕೊಪ್ಪ ಗ್ರಾಮವು ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರನ್ನು ಹುಡುಕುತ್ತಾ ವನ್ಯಜೀವಿಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಅದೇ ರೀತಿ ಮುಗ್ಗೂರು ಅರಣ್ಯ ಪ್ರದೇಶದಿಂದ ಹೊರಬರಲು ಯತ್ನಿಸಿದ ಕಾಡಾನೆಯೊಂದು ಆನೆಗಳು ನಾಡಿಗೆ ಬರದಂತೆ ತಡೆಯಲು ನಿರ್ಮಿಸಲಾಗಿದ್ದ ರೈಲ್ವೆ ಬ್ಯಾರಿಕೇಡ್‌ನ ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿಕೊಂಡಿದೆ
ಕಬ್ಬಿಣದ ಕಂಬಗಳ ನಡುವೆ ದೇಹ ಸಿಲುಕಿಕೊಂಡಿದ್ದರಿಂದ ಆನೆಗೆ ಮುಂದೆ ಹೋಗಲು ಅಥವಾ ಹಿನ್ನೆಡೆಯಲು ಸಾಧ್ಯವಾಗದೆ ತೀವ್ರವಾಗಿ ನರಳಾಡಿದೆ. ಆನೆಯ ಕಿರುಚಾಟವನ್ನು ಕೇಳಿ ಸ್ಥಳೀಯ ಗ್ರಾಮಸ್ಥರು ಧಾವಿಸಿದ್ದು, ತಕ್ಷಣವೇ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಆನೆಯನ್ನು ಸುರಕ್ಷಿತವಾಗಿ ಯಾವುದೇ ಗಾಯಗಳಾಗದಂತೆ ಬ್ಯಾರಿಕೇಡ್‌ನಿಂದ ಹೊರತೆಗೆಯಲು ಜೆಸಿಬಿ ಮತ್ತು ಗ್ಯಾಸ್ ಕಟರ್‌ಗಳ ಸಹಾಯದಿಂದ ಬೃಹತ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ.

