ಚಂಡೀಗಢ: ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಂಜಾಬ್ ಆಪ್ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ವ್ಯಾಟ್ ಹೆಚ್ಚಿಸಿ ವಿದ್ಯುತ್ ಸಬ್ಸಿಡಿಯನ್ನು ರದ್ದುಗೊಳಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳಕ್ಕೆ ಪಂಜಾಬ್ ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 61 ಪೈಸೆ ಮತ್ತು ಡೀಸೆಲ್ ಮೇಲೆ 92 ಪೈಸೆ ಏರಿಕೆಯಾಗಲಿದೆ.
7 ಕಿಲೋವ್ಯಾಟ್ ಲೋಡ್ ವರೆಗಿನ ವಿದ್ಯುತ್ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ. ಇದರ ಜೊತೆ ಬಸ್ ಟಿಕೆಟ್ ದರ ಪ್ರತಿ ಕಿ.ಮೀ.ಗೆ 23 ಪೈಸೆ ಏರಿಕೆ ಮಾಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಂಪುಟದ ಚರ್ಚೆಯ ನಂತರ, ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ವ್ಯಾಟ್ ಏರಿಸುವ ಮೂಲಕ ರಾಜ್ಯ ಹೆಚ್ಚುವರಿ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಆಪ್ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿದೆ.

