ಒಡಿಶಾ: ದೇವಸ್ಥಾನಕ್ಕೆ ಹೊರಟಿದ್ದ ಭಕ್ತರ ಆಟೋರಿಕ್ಷಾಕ್ಕೆ ಖಾಸಗಿ ಬಸ್ಸೊಂದು ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ಘಟನೆ ಗಂಜಾಂ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಇನ್ನು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಂಜಾಂ ಜಿಲ್ಲೆಯ ಪುರುಷೋತ್ತಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಡ್ಕಪಲ್ಲಿ ಛಕ್ ಬಳಿ ಈ ಭೀಕರ ದುರಂತ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ನುವಾಗಾಂವ್ ಪೊಲೀಸ್ ವ್ಯಾಪ್ತಿಯ ಎರೇಂದ್ರ ಗ್ರಾಮದ ಒಂದೇ ಕುಟುಂಬ ಹಾಗೂ ಆಪ್ತರನ್ನೊಳಗೊಂಡ ಸುಮಾರು 10 ಜನರು ಪೋಲ್ಸಾರಾ ಪೊಲೀಸ್ ವ್ಯಾಪ್ತಿಯ ಪ್ರಸಿದ್ಧ ಸಿಂಘಸಾನಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು.

ವಾಹನವು ಲಡ್ಕಪಲ್ಲಿ ಛಕ್ ತಲುಪುತ್ತಿದ್ದಂತೆ, ಹಿಂದಿನಿಂದ ಅತಿ ವೇಗವಾಗಿ ಬಂದ ಬಸ್ ಆಟೋರಿಕ್ಷಾಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತು ಎಂದರೆ, ಬಸ್ ಆಟೋವನ್ನು ರಸ್ತೆಯ ಮೇಲೆಯೇ ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗಿದ್ದ ಪ್ರಯಾಣಿಕರೆಲ್ಲ ಗಂಭೀರ ಗಾಯಗೊಂಡಿದ್ದರು.

ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಟೋದೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆದು ತಕ್ಷಣವೇ ಕೊಡಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHCO) ದಾಖಲಿಸಿದ್ದಾರೆ.

ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ತೀವ್ರ ರಕ್ತಸ್ರಾವವಾಗಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ.

ಇನ್ನುಳಿದ ನಾಲ್ವರ ಸ್ಥಿತಿ ಕೂಡ ಅತ್ಯಂತ ಚಿಂತಾಜನಕವಾಗಿದ್ದು, ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪುರುಷೋತ್ತಮಪುರ ಠಾಣೆಯ ಪೊಲೀಸರು ಆಸ್ಪತ್ರೆ ಹಾಗೂ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸಗಿದ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.