ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಇಂದಿನಿಂದ (ಜುಲೈ 22) ಆರಂಭವಾಗಲಿದ್ದು, ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಜ್ಜಾಗಿದ್ದಾರೆ. ಇನ್ನು, ಪ್ರತಿಪಕ್ಷಗಳೂ ಅಷ್ಟೇ, ದೇಶದ ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಸಂಸತ್ತಿನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ.
ಇಂದಿನಿಂದ ಆರಂಭವಾಗುವ ಬಜೆಟ್ ಅಧಿವೇಶನವು ಆಗಸ್ಟ್ 12ರವರೆಗೆ ನಡೆಯಲಿದೆ. ಜುಲೈ 23ರಂದು ಬಜೆಟ್ ಮಂಡಿಸಲಾಗುತ್ತದೆ. ಅಧಿವೇಶನದಲ್ಲಿ 16 ಕಲಾಪಗಳು ನಡೆಯಲಿವೆ. ಸೋಮವಾರವೇ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ (ತಿದ್ದುಪಡಿ) ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ ಸೇರಿ ಒಟ್ಟು ಆರು ವಿಧೇಯಕಗಳನ್ನು ಮಂಡಿಸಲಿದೆ ಎಂದು ತಿಳಿದುಬಂದಿದೆ.

