ನವದೆಹಲಿ: ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಖ್ ಸಮುದಾಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳನ್ನು ವಿರೋಧಿಸಿ ದೆಹಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಿಖ್ ಸೆಲ್ ಸದಸ್ಯರು ರಾಹುಲ್ ಗಾಂಧಿ ಅವರ ನಿವಾಸದ ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಸಿಖ್ ಸಮುದಾಯದ ಸದಸ್ಯರು, ಮಹಿಳೆಯರು ಸೇರಿದಂತೆ ಹಲವು ಜನ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ವಿಜ್ಞಾನ ಭವನದಿಂದ ಮೆರವಣಿಗೆ ಹೊರಟ ಅವರು ರಾಹುಲ್ ಗಾಂಧಿಯವರ ನಿವಾಸವನ್ನು ತಲುಪಲು ಪ್ರಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದರು. ಬಿಜೆಪಿ ನಾಯಕ ಆರ್‌ಪಿ ಸಿಂಗ್ ಅವರು “ರಾಹುಲ್ ಗಾಂಧಿ ಸಿಖ್ಖರ ಕ್ಷಮೆ ಯಾಚಿಸಬೇಕು. ಅವರು ಭಾರತದ ಮಾನಹಾನಿ ಮಾಡಲು ವಿದೇಶಿ ನೆಲವನ್ನು ಬಳಸಿದ್ದಾರೆ. ಸಿಖ್ಖರು ಪೇಟವನ್ನು ಧರಿಸಲು ಮತ್ತು ಗುರುದ್ವಾರಕ್ಕೆ ಹೋಗಲು ಅನುಮತಿಸುವುದಿಲ್ಲ ಎಂದು ಸಿಖ್ಖರ ಬಗ್ಗೆ ಹೇಳಿಕೆ ನೀಡಿದ್ದಾರೆ.” ಎಂದಿದ್ದಾರೆ.

