ಜೈಪುರ: ಬರೋಬ್ಬರಿ 300 ಮೊಸಳೆಗಳ ಅಭಯಾರಣ್ಯದ ಕೆರೆಯಲ್ಲಿ ಅಪಾಯಕಾರಿ ಬೈಕ್, ಕಾರು ಸ್ಟಂಟ್ ಮಾಡುವ ಮೂಲಕ ಯುವಕರು ಹುಚ್ಚಾಟ ಮೆರೆದಿರುವ ಘಟನೆ ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿರುವ ಸಿಲಿಸೆಹ್ರ್ ಮೊಸಳೆ ಪಾರ್ಕ್‌ನಲ್ಲಿ ನಡೆದಿದೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪೊಲೀಸರು 20 ಮಂದಿ ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುಮೇಲ್ ಸಿಂಗ್ (28), ಯೋಗೇಶ್ (23), ಕೃಷ್ಣ (23), ಪುನೀತ್ (19), ಸಚಿನ್ (27), ಶಿವಚರಣ್ (29), ಎಲ್ಲರೂ ಸೊರ್ಖಾ ಕಾಲಾ ಗ್ರಾಮದ ನಿವಾಸಿಗಳು ಮತ್ತು ಉದಯ್ (18) ಬರೋಡಾದಿಂದ ಏಳು ವ್ಯಕ್ತಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಮರುದಿನ 13 ಇತರರನ್ನು ಬಂಧಿಸಲಾಯಿತು.
ಅಲ್ವಾರ್ ಪೊಲೀಸ್ ಅಧೀಕ್ಷಕ ಆನಂದ್ ಶರ್ಮಾ ಅವರು, ಸಿಲಿಸೆರ್ಹ್ ಸರೋವರ ಮತ್ತು ನಟ್ನಿ ಕಾ ಬಾರಾದಂತಹ ಪ್ರವಾಸಿ ಸ್ಥಳಗಳ ಬಳಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಯಾರಾದರೂ ತಮ್ಮನ್ನು ಅಥವಾ ವನ್ಯಜೀವಿಗಳಿಗೆ ಅಪಾಯವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಅಜಾಗರೂಕ ಕೃತ್ಯಗಳು ಭಾಗಿಯಾಗಿರುವವರ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

