ಹೈದರಾಬಾದ್: ಕೋವಿಡ್ ಲಸಿಕೆ ಬಿಡುಗಡೆ ಮಾಡಿದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ‘ಹಿಲ್ಚೋಲ್’ ಹೆಸರಿನ ಓರಲ್ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ಇದು ಎರಡು ಡೋಸ್‌ನ ಲಸಿಕೆ ಆಗಿದ್ದು, ಮೊದಲ ಡೋಸ್ ಹಾಕಿದ 14ನೇ ದಿನಕ್ಕೆ 2ನೇ ಡೋಸ್ ಲಸಿಕೆ ಹಾಕಲಾಗುತ್ತದೆ. 1 ವರ್ಷ ಮೇಲ್ಪಟ್ಟ ಮಕ್ಕಳು ಇದನ್ನು ಪಡೆಯಲು ಅರ್ಹರಾಗಿದ್ದಾರೆ. ಅಮೆರಿಕಾ ಪ್ರಯೋಜಿತ ಹಿಲ್ಲೆಮನ್ ಲ್ಯಾಬೋರೆಟರಿಯಿಂದ ಪರವಾನಗಿ ಪಡೆದು ಹಿಲ್ಚೋಲ್ (ಬಿಬಿವಿ131) ಅಭಿವೃದ್ಧಿಪಡಿಸಿರುವುದಾಗಿ ಭಾರತ್ ಬಯೋಟೆಕ್ ಹೇಳಿಕೊಂಡಿದ್ದು, ಈ ಲಸಿಕೆಯ ಸುರಕ್ಷತೆ, ಇಮ್ಯುನೊಜೆನೆಸಿಟಿ ಹಾಗೂ ಪರಿಣಾಮಕಾರಿತ್ವವನ್ನು ಧೃಡಪಡಿಸಲಾಗಿದೆ.
ಭಾರತದ ಔಷಧಿ ನಿಯಂತ್ರಕರು ಇದಕ್ಕೆ ಅನುಮತಿ ನೀಡಿದ್ದು, ವಿಶ್ವದ ಇತರೆಡೆ ಕೂಡ ಅನುಮತಿ ಪಡೆಯಲಾಗುತ್ತದೆ ಎಂದು ಹೇಳಿದೆ. ಕಾಲರಾ ನಿಯಂತ್ರಣಕ್ಕೆ ಇದು ಅಗತ್ಯವಾಗಿದ್ದು, ಪ್ರತಿ ವರ್ಷ ವಿಶ್ವಾದ್ಯಂತ 100 ದಶಲಕ್ಷ ಡೋಸ್ ಲಸಿಕೆಗಳಿಗೆ ಬೇಡಿಕೆಯಿರುತ್ತದೆ. ಈಗ ಕಾಲರಾ ವ್ಯಾಕ್ಸಿನ್‌ನ ತಯಾರಿಸುವ ಏಕೈಕ ಕಂಪನಿ ಇರುವ ಕಾರಣ ಲಸಿಕೆಯ ಕೊರತೆ ಎದುರಾಗಿದೆ. ಈ ಕೊರತೆಯನ್ನು ಭಾರತ್ ಬಯೋಟೇಕ್ ನಿಗಿಸುವ ಸಾಧ್ಯತೆ ಇದೆ. 200 ದಶಲಕ್ಷ ಡೋಸ್ ಹಿಲ್ಚೋಲ್ ತಯಾರಿಸುವ ಸಾಮರ್ಥ್ಯದ ಘಟಕಗಳನ್ನು ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ಸ್ಥಾಪಿಸಲಾಗಿದೆ.

