ನವದೆಹಲಿ: ಪರಿಶಿಷ್ಟ ಜಾತಿಗಳಲ್ಲಿ ಅಗತ್ಯ ಇರುವವರಿಗೆ ಒಳಮೀಸಲಾತಿ ನೀಡಬೇಕೆಂದು ನೀಡಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ನಾಳೆ ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯು ರಾಷ್ಟ್ರವ್ಯಾಪಿ ಬಂದ್‍ಗೆ ಕರೆ ನೀಡಿದೆ.

ರಾಜಸ್ಥಾನದ ಎಸ್‌ಸಿ/ಎಸ್‌ಟಿ ಗುಂಪುಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಅಂದ ಹಾಗೆ ಕರ್ನಾಟಕದಲ್ಲಿ ಈ ಬಂದ್ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಯಾವುದೇ ಉದ್ವಿಗ್ನತೆಯನ್ನು ತಪ್ಪಿಸಲು ಎಲ್ಲಾ ಜಿಲ್ಲೆಗಳಾದ್ಯಂತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು. ಭಾರತ್ ಬಂದ್‌ಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಎಸ್‌ಪಿಗಳಿಗೂ ಸೂಚನೆ ನೀಡಲಾಗಿದೆ ಎಂದು ಡಿಜಿಪಿ ಯುಆರ್ ಸಾಹೂ ಹೇಳಿದ್ದಾರೆ.

ಉತ್ತಮ ಸಹಕಾರಕ್ಕೆ ಅನುಕೂಲವಾಗುವಂತೆ ಬಂದ್‌ಗೆ ಕರೆ ನೀಡುವ ಗುಂಪುಗಳೊಂದಿಗೆ ಮತ್ತು ಮಾರುಕಟ್ಟೆ ಸಂಘಗಳೊಂದಿಗೆ ಸಭೆಗಳನ್ನು ಆಯೋಜಿಸಲು ನಾವು ನಮ್ಮ ಅಧಿಕಾರಿಗಳನ್ನು ಕೇಳಿದ್ದೇವೆ ”ಎಂದು ಡಿಜಿಪಿ ಹೇಳಿರುವುದಾಗಿ ವರದಿಯಾಗಿದೆ.

ಇನ್ನು ಬಂದ್ ವೇಳೆ ಹಿಂಸಾಚಾರದ ಸಾಧ್ಯತೆಯ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸಿದ್ಧತೆಗಾಗಿ ಸಭೆ ನಡೆಸಿದ್ದಾರೆ. ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ.

ಭಾರತ್ ಬಂದ್​​ಗೆ ಕರೆ ನೀಡಿರುವುದೇಕೆ?
ವರದಿಗಳ ಪ್ರಕಾರ, ಸುಪ್ರೀಂಕೋರ್ಟ್‌ನ ತೀರ್ಪು ಎಸ್‌ಸಿ ಮತ್ತು ಎಸ್‌ಟಿ ಗುಂಪುಗಳೊಳಗೆ ಉಪ-ವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿದ್ದು,”ನಿಜವಾಗಿಯೂ ಅಗತ್ಯವಿರುವವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು” ಎಂದು ಹೇಳಿದೆ. ಈ ನಿರ್ಧಾರವು ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸುವುದು ಮತ್ತು ಅದನ್ನು ಹಿಂಪಡೆಯುವಂತೆ ಒತ್ತಾಯಿಸುವುದು ಭಾರತ್ ಬಂದ್‌ನ ಮುಖ್ಯ ಉದ್ದೇಶವಾಗಿದೆ ಎಂದು ವರದಿಗಳು ತಿಳಿಸಿವೆ.