ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಚೆನ್ನೈ ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು  ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಜೆ ಘೋಷಿಸಿದ್ದಾರೆ.

ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳ ಕಾಲ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ.

ಮಳೆಯಾಗುತ್ತಿರುವ ಭಾಗಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಾಯವಾಣಿ ಆರಂಭಿಸಿದೆ. ಸಹಯಾಕ್ಕಾಗಿ 1070, ಜಿಲ್ಲಾ ಸಹಾಯವಾಣಿ 1077, ವಾಟ್ಸಪ್‌ ಸಂಖ್ಯೆ 9445869848ಕ್ಕೆ ಸಂಪರ್ಕಿಸಲು ಕೋರಲಾಗಿದೆ. ಭಾರೀ ಮಳೆಯ ಅವಧಿಯಲ್ಲಿ ನಾಗರಿಕರ ಸಂಚಾರಕ್ಕೆ ಹೆಚ್ಚಿನ ಮೆಟ್ರೋ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಚೆನ್ನೈ ಮೆಟ್ರೋ ರೈಲು ಸೇವೆ ಘೋಷಿಸಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಧರ್ಮಪುರಿ, ಸೇಲಂ, ನೀಲಗಿರಿ, ಈರೋಡ್, ನಾಮಕ್ಕಲ್, ಅರಿಯಲೂರ್, ಪೆರಂಬಲೂರ್, ತಿರುಚಿರಾಪಳ್ಳಿ, ಕರೂರ್, ತಿರುಪ್ಪೂರ್, ಕೊಯಮತ್ತೂರು, ದಿಂಡಿಗಲ್, ಪುದುಕ್ಕೊಟ್ಟೈ, ನಾಗಪಟ್ಟಣಂ, ಶಿವಗಂಗೈ ಮತ್ತು ರಾಮನಾಥಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಅ.15-17ರವರೆಗೆ ತಮಿಳುನಾಡು ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.