ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತ -ಬಾಂಗ್ಲಾದೇಶದ ಗಡಿಯಲ್ಲಿ ಸದ್ಯದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ಸಮಿತಿಯನ್ನು ರಚಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು, ಹಿಂದೂಗಳು ಸೇರಿದಂತೆ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪೂರ್ವ ಕಮಾಂಡ್‌ನ ಗಡಿ ಭದ್ರತಾ ಪಡೆ ಎಡಿಜಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ’ ಎಂದು ಹೇಳಿದ್ದಾರೆ.
ಅರಾಜಕತೆ ಮೂಡಿರುವ ಬಾಂಗ್ಲಾದೇಶದಲ್ಲಿ ಈಗ ಅಲ್ಪಸಂಖ್ಯಾತ ಹಿಂದೂಗಳ ಮನೆ, ಉದ್ಯಮ ಹಾಗೂ ದೇವಸ್ಥಾನಗಳನ್ನು ಗುರಿಯಾಗಿಸಿ ದಾಳಿ, ದಾಂದಲೆ ನಡೆಸುತ್ತಿರುವ ಕೃತ್ಯಗಳು ಹೆಚ್ಚುತ್ತಿವೆ.
ಹಿಂದೂ ಮಹಿಳೆಯರನ್ನೂ ಗುರಿಯಾಗಿಸಿ ಹಲ್ಲೆ ನಡೆಯುತ್ತಿದೆ. ಹಿಂಸಾಚಾರದಲ್ಲಿ ಅವಾಮಿ ಲೀಗ್ ಪಕ್ಷದ ಇಬ್ಬರು ಹಿಂದೂ ನಾಯಕರು ಹತರಾಗಿದ್ದಾರೆ ಎಂದು ಸಮುದಾಯದ ನಾಯಕರು ತಿಳಿಸಿದ್ದಾರೆ.
ದೇಶದ ವಿವಿಧೆಡೆ ಇಂತಹ ಕೃತ್ಯಗಳು ನಡೆದಿವೆ. ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಆತಂಕ ಮೂಡಿದೆ ಎಂದು ಬಾಂಗ್ಲಾದೇಶ ಹಿಂದೂ -ಬೌದ್ಧ- ಕ್ರೈಸರ ಯೂನಿಟಿ ಕೌನ್ಸಿಲ್‌ನ ನಾಯಕ ಕಾಜೋಲ್ ದೇಬನಾಥ್ ಅವರು ತಿಳಿಸಿದ್ದಾರೆ

