ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ಮೇಲಿನ ನಿಷೇಧವನ್ನು ಗೃಹ ಸಚಿವಾಲಯ ಇಂದು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದೆ.

ಈ ಭಯೋತ್ಪಾದಕ ಸಂಘಟನೆಯನ್ನು ಮೊದಲು 2019 ರಲ್ಲಿ ನಿಷೇಧಿಸಲಾಗಿತ್ತು. ಎಸ್ಎಫ್​ಜೆ ಭಾರತದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆ ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಎಸ್ಎಫ್​ಜೆಯ ಚಟುವಟಿಕೆಗಳು ದೇಶದ ಶಾಂತಿ, ಏಕತೆ ಮತ್ತು ಸಮಗ್ರತೆ ಭಂಗ ತರುತ್ತಿದೆ ಎಂದು ಸಚಿವಾಲಯ ಹೇಳಿದೆ. ಗೃಹ ಸಚಿವಾಲಯದ ಪ್ರಕಾರ, ಗುರುಪತ್ವಂತ್​ ಸ್ಥಾಪಿಸಿದ ಎಸ್ಎಫ್​ಜೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಭಂಗಗೊಳಿಸುವ ಉದ್ದೇಶದಿಂದ ಪಂಜಾಬ್​​ನಲ್ಲಿ ರಾಷ್ಟ್ರ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಹೀಗಾಗಿ ಅದರ ಮೇಲಿನ ನಿಷೇಧ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.

ಎಸ್ಎಫ್​ಜೆ ಸಂಘಟನೆಯು ಇತರ ಉಗ್ರಗಾಮಿ ಸಂಘಟನೆಗಳು ಮತ್ತು ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಭಾರತ ಒಕ್ಕೂಟದ ಭೂಪ್ರದೇಶದಿಂದ ಪ್ರತ್ಯೇಕವಾಗಿ ಖಲಿಸ್ತಾನವನ್ನು ರಚಿಸಲು ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಮಾಡುತ್ತಿದೆ. ಜತೆಗೆ ಉಗ್ರಗಾಮಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ” ಎಂದು ಆರೋಪಿಸಲಾಗಿದೆ.