ಕೆಲಸದ ಒತ್ತಡ ಸಹಿಸದೇ ಕಳೆದ ಹತ್ತು ದಿನಗಳಲ್ಲಿ ಈಗ ಮೂರನೆಯ ಸಾವು ಸಂಭವಿಸಿದೆ. ಪುಣೆಯ ಇವೈ ಕಂಪೆನಿಯ ಯುವತಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​ ಉದ್ಯೋಗಿ ಕೆಲಸದ ಒತ್ತಡ ತಾಳದೇ ಮೃತಪಟ್ಟಿದ್ದರೆ, ಈಗ ಉತ್ತರ ಪ್ರದೇಶದ ಝಾನ್ಸಿಯ ತರುಣ್ ಸಕ್ಸೇನಾ ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ!  ಬಜಾಜ್ ಫೈನಾನ್ಸ್‌ನಲ್ಲಿ ಏರಿಯಾ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ  42 ವರ್ಷದ ತರುಣ್​ ಅವರು,  ಅತ್ಯುತ್ತಮ ಪ್ರಯತ್ನ ಮಾಡಿದರೂ ಟಾರ್ಗೆಟ್​ ರೀಚ್​ ಆಗಲು ಸಾಧ್ಯವಾಗದ ಕಾರಣ ಅಪಾರ ಒತ್ತಡಕ್ಕೆ ಒಳಗಾಗಿರುವುದಾಗಿ ಹೇಳಿ ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬೇರೆ ಕೊಠಡಿಯಲ್ಲಿ ಇರಿಸಿ ತಾವು ಇನ್ನೊಂದು ಕೊಠಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಐದು ಪುಟಗಳ ಡೆತ್​ನೋಟ್​ನಲ್ಲಿ  ತಮ್ಮ ಸಾವಿನ ಕಾರಣವನ್ನು ತರುಣ್​ ಬರೆದಿಟ್ಟಿದ್ದು, ಇದರಲ್ಲಿ ಅಧಿಕಾರಿಗಳ ಬಗ್ಗೆಯೂ ವಿವರಿಸಿದ್ದಾರೆ.  ಕಳೆದ ಎರಡು ತಿಂಗಳಿಂದ  ಟಾರ್ಗೆಟ್​ ಪೂರೈಸುವಂತೆ ಮೇಲಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ರೆ ಸಂಬಳ ಕಟ್​ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಏನು ಮಾಡಿದರೂ ನನಗೆ ಟಾರ್ಗೆಟ್​ ರೀಚ್​ ಆಗಲು ಸಾಧ್ಯವಾಗುತ್ತಿಲ್ಲ.  ನನ್ನ ಸಾವಿಗೆ ಕಂಪೆನಿಯ ಇಬ್ಬರು ಅಧಿಕಾರಿಗಳನ್ನು ಹೊಣೆಗಾರರು ಎಂದು ಅದರಲ್ಲಿ ಅವರು ಉಲ್ಲೇಖಿಸುರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರು ಬಜಾಜ್ ಫೈನಾನ್ಸ್ ಸಾಲಗಳ ಇಎಂಐ  ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಆದರೆ ಹಲವಾರು ಸಮಸ್ಯೆಗಳಿಂದಾಗಿ ಟಾರ್ಗೆಟ್​ ರೀಚ್​ ಆಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ವರುಣ್​ ತನ್ನ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದರಂತೆ. ಈ ಹಿನ್ನಲೆ ಹಿರಿಯ ಅಧಿಕಾರಿಗಳು ಪದೇ ಪದೇ ಅವಮಾನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.