ನವದೆಹಲಿ: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಈ ಮಾಹಿತಿಯನ್ನು ದಾಖಲಿಸಿಕೊಂಡ ಸರ್ವೋಚ್ಚ ನ್ಯಾಯಾಲಯವು, ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯವೇ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿ ಸಂಬಂಧಿತ ಅರ್ಜಿಗಳನ್ನು ವಿಲೇವಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಯುಪಿ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ದೇವಾಲಯದಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲೇ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಎಸ್ಐಟಿ ತನಿಖೆಯಿಂದ ದೃಢಪಟ್ಟಿದೆ ಎಂದು ಅವರು ವಿವರಿಸಿದರು. ಹೀಗೆ ಲಪಟಾಯಿಸಿದ ಹಣದಲ್ಲಿ ಕೆಲ ಆರೋಪಿಗಳು ವಿವಿಧ ಸ್ಥಿರಾಸ್ತಿಗಳನ್ನು ಖರೀದಿಸಿದ್ದರೆ, ಇನ್ನು ಕೆಲವರು ಆ ಹಣವನ್ನು ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದ್ದಾರೆ ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.
ಸರ್ಕಾರದ ವಾದವನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಅಕ್ರಮದ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಿಗೆ ಅಯೋಧ್ಯೆಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಸಹಕರಿಸಲು ಅನುಮತಿ ನೀಡಿತು. ಪ್ರಕರಣದ ಯಾವುದೇ ಗುಣಾವಗುಣಗಳ ಕುರಿತು ತಾವು ಯಾವುದೇ ಅಂತಿಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಅರ್ಜಿಗಳನ್ನು ಇತ್ಯರ್ಥಗೊಳಿಸಿತು.
ಇದೇ ಸಂದರ್ಭದಲ್ಲಿ, ಪ್ರಸ್ತುತ ರಾಮಮಂದಿರ ನಿರ್ಮಾಣವಾಗಿರುವ ಜಾಗವು ಮೂಲ ಅಯೋಧ್ಯಾ ಭೂವಿವಾದದ ತೀರ್ಪಿಗೆ ಒಳಪಟ್ಟ ಜಾಗವೇ ಎಂಬುದನ್ನು ನಿರ್ಧರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹೊಸ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಈ ಹಿಂದೆ ಸೆಪ್ಟೆಂಬರ್ 21 ರಂದು ಎಸ್ಐಟಿ ತಂಡವು, ಸೆಪ್ಟೆಂಬರ್ 25 ರ ಒಳಗೆ ಮೊದಲ ಆರೋಪಪಟ್ಟಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

