ನವದೆಹಲಿ: ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಯುದ್ಧದ ಸಮಯದಲ್ಲಿ ನೆರೆಯ ರಾಷ್ಟ್ರಗಳ ಮೇಲೆ ನಡೆಸಿದ ದಾಳಿಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದ್ದಾರೆ.
ಯುದ್ಧದಲ್ಲಿ ದಾಳಿಗೊಳಗಾಗಿರುವ ನೆರೆಯ ರಾಷ್ಟ್ರಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ನೆರೆಯ ರಾಷ್ಟ್ರಗಳ ಮೇಲೆ ಇನ್ನು ಮುಂದೆ ಯಾವುದೇ ದಾಳಿ ನಡೆಸಲಾಗುವುದಿಲ್ಲ. ಇರಾನ್ ಮೇಲೆ ಯಾವ ದೇಶ ದಾಳಿ ಮಾಡುತ್ತದೋ ಆ ದೇಶಗಳ ಮೇಲಷ್ಟೇ ನಾವು ಪ್ರತಿದಾಳಿ ನಡೆಸುತ್ತೇವೆ. ಬದಲಿಗೆ ಇತರ ದೇಶಗಳ ಮೇಲೆ ನಾವು ಕ್ಷಿಪಣಿಗಳನ್ನು ಹಾರಿಸುವುದಿಲ್ಲ ಎಂದು ಪೆಜೆಶ್ಕಿಯಾನ್ ಭರವಸೆ ನೀಡಿದ್ದಾರೆ.
ಆದರೂ ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಯುದ್ಧದಲ್ಲಿ ತಾನು ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಶತ್ರುಗಳು ಇರಾನ್ ಜನರ ಶರಣಾಗತಿಯ ಆಶಯವನ್ನು ಅವರು ಸಮಾಧಿ ಮಾಡಬೇಕಷ್ಟೇ. ಬದಲಿಗೆ ನಾವು ಎಂದೂ ಶರಣಾಗಲ್ಲ ಎಂದು ಅವರು ಖಡಕ್ಕಾಗಿ ಉತ್ತರಿಸಿದ್ದಾರೆ.
ಇರಾನ್ ಒಂದು ವಾರದಿಂದ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಕ್ಷಿಪಣಿಗಳನ್ನು ಹಾರಿಸುತ್ತಿದೆ. ದುಬೈ, ಅಬುಧಾಬಿ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಹಲವು ಗಲ್ಫ್ ಪ್ರದೇಶಗಳ ಮೇಲೆ ಈ ದಾಳಿಗಳು ನಡೆದಿವೆ.

