ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್‌ವೊಬ್ಬರು ಪ್ರಯಾಣಿಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ವೀರೇಂದ್ರ ಸೆಜ್ವಾಲ್ ಅವರು ಪ್ರಯಾಣಿಕ ಅಂಕಿತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ತನಿಖೆ ಪೂರ್ಣಗೊಳ್ಳುವವರೆಗೂ ಪೈಲಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಘಟನೆ ಕುರಿತು ತನಗಾದ ನೋವನ್ನು ಸಂತ್ರಸ್ತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ತನ್ನ ಮುಖದಲ್ಲಿ ರಕ್ತ ಬರುತ್ತಿರುವ ಮತ್ತು ಪೈಲಟ್‌ನ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ.
‘ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ವೀರೇಂದ್ರ ಸೆಜ್ವಾಲ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಏಳು ವರ್ಷದ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ’ ಎಂದು ಪ್ರಯಾಣಿಕ ಅಂಕಿತ್ ದಿವಾನ್ ಹೇಳಿಕೊಂಡಿದ್ದಾರೆ.
ಪ್ರಯಾಣಿಕ ಅಂಕಿತ್ ದೇವನ್ ಎಂಬುವವರು ತಮ್ಮ ಕುಟುಂಬದೊಂದಿಗೆ (4 ತಿಂಗಳ ಶಿಶು ಮತ್ತು 7 ವರ್ಷದ ಮಗಳೊಂದಿಗೆ) ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ನಿಲ್ದಾಣ ಸಿಬ್ಬಂದಿ ಅವರನ್ನ ಆದ್ಯತೆಯ ಸುರಕ್ಷತಾ ಲೇನ್ (ಸಿಬ್ಬಂದಿ ಮತ್ತು ಸಹಾಯ ಅಗತ್ಯವಿರುವ ಪ್ರಯಾಣಿಕರಿಗೆ ಮೀಸಲಾದ ಲೇನ್) ಬಳಸುವಂತೆ ಸಲಹೆ ನೀಡಿದ್ದರು.
ಆದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಪ್ಟನ್ ವೀರೇಂದರ್ ಸೆಜ್ವಾಲ್ ಅವರು ಸಾಲಿನ ಮುಂದೆ ಬಂದು ನಿಲ್ಲಲು ಪ್ರಯತ್ನಿಸಿದ್ದಾರೆ ಎಂದು ದೇವನ್ ಆರೋಪಿಸಿದ್ದಾರೆ. ಇದಕ್ಕೆ ದೇವನ್ ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ ಉಂಟಾಗಿ, ಪೈಲಟ್ ಅವರು ಅವಮಾನಕರ ಭಾಷೆ ಬಳಸಿ ನಂತರ ದೈಹಿಕವಾಗಿ ದಾಳಿ ಮಾಡಿದ್ದಾರೆ ಎಂದು ದೇವನ್ ಆರೋಪಿಸಿದ್ದಾರೆ.
‘ದೆಹಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಇಂತಹ ನಡವಳಿಕೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ಸಂಬಂಧಪಟ್ಟ ಉದ್ಯೋಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದೂ ವಿಮಾನಯಾನ ಸಂಸ್ಥೆ ಹೇಳಿದೆ.

