ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿದ್ದು, ದೆಹಲಿಯ ಅತಿ ಕಿರಿಯ ವಯಸ್ಸಿನ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರಾಧ್ಯಕ್ಷ ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅತಿಶಿ ಅವರನ್ನು ದೆಹಲಿಯ ಮುಂದಿನ ಸಿಎಂ ಎಂದು ಘೋಷಿಸಲಾಗಿತ್ತು.
ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಅರವಿಂದ್ ಕೇಜ್ರಿವಾಲ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ದಿಢೀರನೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಅತಿಶಿ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಗಿತ್ತು.
ಅತಿಶಿ ಇಂದು ದೆಹಲಿಯ ರಾಜ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವ ಸಂಪುಟದ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಅತಿಶಿ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದರು.
ಅತಿಶಿ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸೌರಭ್ ಭಾರದ್ವಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ಅವರ ಬಳಿಕ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆಗೆ ಅತಿಶಿ ಪಾತ್ರರಾಗಿದ್ದಾರೆ.

