ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ. ಮಂಗಳವಾರ (ಸೆ.17) ಸಂಜೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಕೇಜ್ರಿವಾಲ್ ಅವರು ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಸಿಲುಕಿರುವ ಅರವಿಂದ ಕೇಜ್ರಿವಾಲ್ ಅವರು ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದಿದ್ದರು.
ಎರಡು ದಿನಗಳ ಹಿಂದೆ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾನು ರಾಜೀನಾಮೆ ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಅದರಂತೆ ಇಂದು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಯುವ ನಾಯಕಿ, ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಆತಿಶಿ ಅವರು ದೆಹಲಿಯ ಮುಂದಿನ ಸಿಎಂ ಆಗಲಿದ್ದಾರೆ. ಮಂಗಳವಾರ ಇದರ ಬಗ್ಗೆ ಪಕ್ಷ ತೀರ್ಮಾನಿಸಿದೆ.
ಉತ್ತರಾಧಿಕಾರಿ ಅತಿಶಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ರಾಜೀನಾಮೆ ಸಲ್ಲಿಕೆ ವೇಳೆ ಕೇಜ್ರಿವಾಲ್ ಜತೆಗಿದ್ದರು. ಸಿಸೋಡಿಯಾ ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದು, ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

