ಕಾಸರಗೋಡು: ಶಬರಿಮಲೆ ಕ್ಷೇತ್ರದ ಮಾಲಿಕಾಪುರ ತಮ್ಮ ದೇವಾಲಯದ ಹಿಂಭಾಗದಲ್ಲಿರುವ ಏಷ್ಯಾದ ಅತಿದೊಡ್ಡ ಅನ್ನದಾನ ಮಂಟಪದಲ್ಲಿ ಈ ವರ್ಷ ದಿನಂಪ್ರತಿ 10 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.
ಈ ವರ್ಷ ದೇವಾಲಯ ತೆರೆದ ಬಳಿಕ ಇಲ್ಲಿಯ ತನಕ ಊಟ ಮಾಡಿದವರ ಸಂಖ್ಯೆ ಒಂದು ಲಕ್ಷ ದಾಟಿದೆ. ಶಬರಿಮಲೆ ಸನ್ನಿಧಾನಕ್ಕೆ ಬರುವ ಅಯ್ಯಪ್ಪ ಭಕ್ತರಿಗೆ ದೇವಸ್ವಂ ಮಂಡಳಿಯು ಅನ್ನ ವಿತರಣೆ ವ್ಯವಸ್ಥೆ ಒದಗಿಸುತ್ತಿದೆ.
ಅನ್ನದಾನ ಮಂಟಪದಲ್ಲಿ ದಿನಂಪ್ರತಿ ಮೂರು ಬಾರಿ ಆಹಾರ ನೀಡಲಾಗುತ್ತದೆ. ಅನ್ನ, ಕಡಲೆ ಪದಾರ್ಥ, ಚಟ್ನಿ ಮತ್ತು ಕುದಿಸಿದ ನೀರು ಬೆಳಗ್ಗೆ 6 ರಿಂದ 11 ರವರೆಗೆ ನೀಡಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುವ ಮಧ್ಯಾಹ್ನದ ಊಟವು 3.30ರ ತನಕ ಇರುತ್ತದೆ. ಸಂಜೆ 6.45 ರಿಂದ ಭೋಜನವನ್ನು ನೀಡಲಾಗುತ್ತದೆ.

