ಕೇರಳ: ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಗಗನಸಖಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
960 ಗ್ರಾಂ ಚಿನ್ನವನ್ನು ಆಕೆ ತನ್ನ ಗುದನಾಳದಲ್ಲಿಟ್ಟುಕೊಂಡು ಬಂದಿದ್ದಳು ಎನ್ನಲಾಗಿದೆ. ಇದೀಗ ಆಕೆಯನ್ನು ಅರೆಸ್ಟ್ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ ಆಕೆಯನ್ನು 14 ದಿನಗಳ ಕಾಲ ತನ್ನ ವಶಕ್ಕೆ ಪಡೆದಿದೆ.
ಬಂಧಿತ ಗಗನಸಖಿಯನ್ನು ಕೋಲ್ಕತ್ತಾ ಮೂಲದ ಸುರಭಿ ಖತುನ್ ಎಂದು ಗುರುತಿಸಲಾಗಿದೆ. ಆಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಮಸ್ಕತ್‌ನಿಂದ ಕಣ್ಣೂರಿಗೆ ಮೇ 28ರಂದು ಬಂದಿದ್ದ ವಿಮಾನದಲ್ಲಿ ಆಕೆ ಬಂದಿದ್ದಳು. DRI ಅಧಿಕಾರಿಗಳು ಚೆಕ್ಕಿಂಗ್ ಮಾಡುವಾಗ ಆಕೆಯ ಬಳಿಕ ಚಿನ್ನ ಇರುವ ವಿಚಾರ ಬಯಲಾಗಿದೆ. ತಕ್ಷಣ ಆಕೆಯನ್ನು ಅರೆಸ್ಟ್ ಮಾಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದಾದ ಬಳಿಕ ಆಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ಆಕೆಯನ್ನು 14 ದಿನಗಳ ಕಾಲ DRI ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನು ಗಗನಸಖಿಯೊಬ್ಬಳು ತನ್ನ ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಅಕ್ರಮ ಸಾಗಾಟ ಮಾಡಿರುವುದು ಇದೇ ಮೊದಲ ಪ್ರಕರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

