ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರು ಕಾಡಿನಲ್ಲಿ ಮರಕ್ಕೆ ಸರಪಳಿಯಲ್ಲಿ ಕಟ್ಟಿಹಾಕಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ.

ಆಕೆಯ ಯುಎಸ್ ಪಾಸ್‌ಪೋರ್ಟ್‌ನ ಫೋಟೊಕಾಪಿ ಮತ್ತು ತಮಿಳುನಾಡು ವಿಳಾಸದೊಂದಿಗೆ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳು ಆಕೆಯ ಬಳಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ವರದಿ ಮಾಡಿದ್ದಾರೆ. ಶನಿವಾರ ಸಂಜೆ ಜಿಲ್ಲೆಯಿಂದ ಸರಿಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಮಹಿಳೆ ಅಳುತ್ತಿರುವುದು ಸ್ಥಳೀಯ ಕುರಿಗಾಹಿಗಳಿಗೆ ಕೇಳಿಬಂದಿತ್ತು. ಆಕೆ ಸರಪಳಿ ಸಿಲುಕಿಕೊಂಡು ಸಂಕಷ್ಟದಲ್ಲಿರುವುದನ್ನು ಕಂಡು ಕುರುಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.

ಮಹಿಳೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಸಾವಂತವಾಡಿ ಮತ್ತು ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ. ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆಕೆಯ ಬಳಿ ಈ ಹಿಂದಿನ ವೈದ್ಯಕೀಯ ಪ್ರಿಸ್ಕ್ರಿಪ್ಷನ್​​ ಇದ್ದು, ಅದನ್ನು ಪರಿಶೀಲಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.