ಹೊಸದಿಲ್ಲಿ: ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ‘ಅಲ್ಪಸಂಖ್ಯಾತ’ ಎಂಬ ಸಾಮಾನ್ಯ ಪದದಲ್ಲಿ ಉಲ್ಲೇಖಿಸುವ ಬದಲು, ‘ಮುಸ್ಲಿಂ’ ಸಮುದಾಯದ ಸಮಸ್ಯೆಗಳೆಂದು ಸ್ಪಷ್ಟವಾಗಿ ಪ್ರಸ್ತಾಪಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಮುಸ್ಲಿಂ ನಾಯಕರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಲಹಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ವಿರುದ್ಧ ಅನ್ಯಾಯ ನಡೆದರೆ ಅದನ್ನು ನೇರವಾಗಿ ‘ಮುಸ್ಲಿಮರ ವಿರುದ್ಧದ ಅನ್ಯಾಯ’ ಎಂದು ಹೇಳಬೇಕು ಎಂದು ಒತ್ತಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಲಿತರು, ಹಿಂದುಳಿದ ವರ್ಗಗಳು (ಒಬಿಸಿ) ಅಥವಾ ಸಾಮಾನ್ಯ ವರ್ಗದ ಜನರ ಮೇಲೆ ದಾಳಿ ನಡೆದರೂ, ಆ ಸಮುದಾಯಗಳನ್ನು ಸ್ಪಷ್ಟವಾಗಿ ಗುರುತಿಸಿ ಸಮಸ್ಯೆಗಳನ್ನು ಎತ್ತಬೇಕು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
‘ಮುಸ್ಲಿಂ’ ಪದ ಬಳಕೆಯಿಂದ ಕಾಂಗ್ರೆಸ್ ಹಿಂದೆ ಸರಿಯಬಾರದು ಎಂಬುದು ರಾಹುಲ್ ಗಾಂಧಿಯವರ ಸ್ಪಷ್ಟ ಸಂದೇಶವಾಗಿತ್ತು. ಇತ್ತೀಚಿನ ದಿನಗಳಲ್ಲಿ ‘ಮುಸ್ಲಿಂ’ ಎಂದು ಹೇಳುವುದನ್ನು ತಪ್ಪಿಸಿ ‘ಅಲ್ಪಸಂಖ್ಯಾತ’ ಎಂಬ ಪದವನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ತಿಳಿಸಿದ್ದಾರೆ.
ಪಕ್ಷದ ಸಂಘಟನಾ ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ ಸಿಗುವಂತೆ ಅಲ್ಪಸಂಖ್ಯಾತ ಘಟಕ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

