ನವದೆಹಲಿ: ಹೈದರಾಬಾದ್ ಮೂಲದ ಭಾರತೀಯ ಕಂದಾಯ ಸೇವೆ ಹಿರಿಯ ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಿದೆ.

ಹೈದರಾಬಾದ್‌ನಲ್ಲಿರುವ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿರುವ ಎಂ.ಅನುಸೂಯಾ ಅವರು ತಮ್ಮ ಹೆಸರನ್ನು ಎಂ.ಅನುಕತಿರ್ ಸೂರ್ಯ ಎಂದು ಮತ್ತು ಲಿಂಗವನ್ನು ಹೆಣ್ಣಿನಿಂದ ಪುರುಷ ಎಂದು ಬದಲಾಯಿಸಲು ವಿನಂತಿಸಿದ್ದರು.

ಅಧಿಕಾರಿಯ ಮನವಿಯನ್ನು ಪರಿಗಣಿಸಿ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಎಂ.ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ಮುಂದೆ ಅಧಿಕಾರಿಯನ್ನು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಎಂ.ಅನುಕತಿರ್ ಸೂರ್ಯ’ ಎಂದು ಪರಿಗಣಿಸಲಾಗುತ್ತದೆ ಎಂದು ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಆದೇಶದಲ್ಲಿ ತಿಳಿಸಿದೆ.