ಲಖನೌ: ಎರಡು ದಿನಗಳ ಹಿಂದೆ ನಡುರಸ್ತೆಯಲ್ಲಿ ಯುಕವರ ಗುಂಪೊಂದು ನೀರು ಎರಚಿ ಕಿರುಕುಳ ಕೊಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಘಟನಾ ಸ್ಥಳ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಎಲ್ಲಾ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
ಲಖನೌದಲ್ಲಿ ನಡೆದ ಈ ಘಟನೆ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಯೋಗಿ, ಇನ್ನು ಮುಂದೆ ʼಬುಲೆಟ್ ರೈಲುʼ ಶುರುವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಅವರನ್ನು ಪವನ್ ಯಾದವ್ ಮತ್ತು ಮೊಹಮ್ಮದ್ ಅರ್ಬಾಜ್ ಎಂದು ಗುರುತಿಸಲಾಗಿದೆ. ಮಹಿಳೆಯರಿಗೆ ಕಿರುಕುಳ ನೀಡುವವರನ್ನು ಬಿಡುವುದಿಲ್ಲ ಎಂದು ಹೇಳಿದ ಸಿಎಂ ಯೋಗಿ, ಮಹಿಳೆಯರ ರಕ್ಷಣೆಯಲ್ಲಿ ವಿಫಲರಾಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಮಹಿಳೆಯರ ಸುರಕ್ಷತೆಯು ನಮಗೆ ಪ್ರಮುಖ ಸಮಸ್ಯೆಯಾಗಿದೆ ಮತ್ತು ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ನಾವು ಪ್ರತಿಯೊಬ್ಬ ಸಹೋದರಿ ಮತ್ತು ಮಗಳಿಗೆ ಭರವಸೆ ನೀಡಿದ್ದೇವೆ. ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಗಂಭೀರವಾಗಿ ತೆಗೆದುಕೊಂಡ ಪರಿಣಾಮ ಇಡೀ ಚೌಕಿಯನ್ನು ಅಮಾನತುಗೊಳಿಸಲಾಗಿದೆ, ಇನ್ಸ್‌ಪೆಕ್ಟರ್ ಅಮಾನತು ಮಾಡಲಾಗಿದೆ, ಎಎಸ್ಪಿ, ಡಿಸಿಪಿ, ಎಲ್ಲರನ್ನೂ ತೆಗೆದುಹಾಕಲಾಗಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

