ಮುಂಬೈ: ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮಹಾರಾಷ್ಟ್ರದ ಬದ್ಲಾಪುರದಲ್ಲಿ ಉದ್ನಿಗ್ನ ಪ್ರತಿಸ್ಥಿತಿ ನಿರ್ಮಿಸಿದ್ದು, ಸಾರ್ವಜನಿಕರ ಪ್ರತಿಭಟನೆ ಬುಧವಾರ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಅಲ್ಲದೇ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಇದೇ ವೇಳೆ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ 72 ಪ್ರತಿಭಟನಾಕಾರರನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ನಡೆದಿದ್ದ ಪ್ರತಿಭಟನೆಯಲ್ಲಿ ರೈಲ್ವೆ ನಿಲ್ದಾಣ ಮತ್ತು ಬದ್ಲಾಪುರದ ಇತರ ಭಾಗಗಳಲ್ಲಿ ಕಲ್ಲು ತೂರಾಟದ ಘಟನೆಗಳಲ್ಲಿ ಕನಿಷ್ಠ 17 ನಗರ ಪೊಲೀಸ್ ಸಿಬ್ಬಂದಿ ಮತ್ತು ಸುಮಾರು 8 ರೈಲ್ವೆ ಪೊಲೀಸರು ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದೆ. ಇನ್ನೂ ನಿಷೇಧಾಜ್ಞೆ ಉಲ್ಲಂಘನೆ ಆರೋಪದ ಮೇಲೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೀನ ಕೃತ್ಯ ಖಂಡಿಸಿ ಮತ್ತು ಮಹಿಳಾ ಸುರಕ್ಷತೆಗಾಗಿ ಮಹಾ ವಿಕಾಸ್ ಅಗಾಡಿ ಆ.24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ. ಅಗಾಡಿಯ ಮಹಾಸಭೆಯಲ್ಲಿ, ಕಾಂಗ್ರೆಸ್, ಶಿವಸೇನೆ (UBT) ಮತ್ತು NCP ಮೂರು ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಬದ್ಲಾಪುರ ಘಟನೆ ಮತ್ತು ರಾಜ್ಯದ ಒಟ್ಟಾರೆ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆಯ ಬಗ್ಗೆ ಚರ್ಚಿಸಿದರು.

