ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶದ ಜನತೆಯನ್ನು ಉದ್ದೇಶಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಕೆಂಪುಕೋಟೆಯ ಅಂಗಳದಲ್ಲಿ ನಡೆದ ಅದ್ದೂರಿ ಸಮಾರಂಭಕ್ಕೆ ಕೇಂದ್ರ ಸಚಿವರು, ಗಣ್ಯರು, ರಾಜತಾಂತ್ರಿಕರು, ಸೇನಾಪಡೆಗಳ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಯುವ ಸಮೂಹವೂ ಪಾಲ್ಗೊಂಡು ದೇಶದ 80ನೇ ಸ್ವಾತಂತ್ರ್ಯೋತ್ಸವದ ವೈಭವಕ್ಕೆ ಸಾಕ್ಷಿಯಾದರು.

ಪ್ರಧಾನಿ ಮೋದಿ ಅವರಿಗೆ ಕೆಂಪುಕೋಟೆಯಲ್ಲಿ ಗಾರ್ಡ್ ಆಫ್ ಆನರ್ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನ ನುಡಿಸಲಾಯಿತು. ವಂದೇ ಮಾತರಂ ಗೀತೆಗೆ 150ನೇ ವರ್ಷಾಚರಣೆ ಹಿನ್ನೆಲೆ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ನುಡಿಸಲಾಯಿತು. ನಂತರ ರಾಷ್ಟ್ರಗೀತೆಯನ್ನ ನುಡಿಸಲಾಯಿತು.