ಚಿಂತಾಮಣಿ: ಇಸ್ಪೀಟು ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಮಂಗಳವಾರ ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿರುವ ಘಟನೆ ತಾಲ್ಲೂಕಿನ ಮಿಂಚಲಹಳ್ಳಿ ಗ್ರಾಮದ ಸರ್ಕಾರಿ ಕೆರೆ ಅಂಗಳದಲ್ಲಿ ನಡೆದಿದೆ.

ಜಮೀರ್‌, ಜಿ.ಎನ್‌. ನರೇಶ್, ನಾರಾಯಣರೆಡ್ಡಿ, ಎಂ.ಎನ್‌. ಹರೀಶ್, ಡಿ.ವಿ. ಸುರೇಂದ್ರ, ಡಿ.ಎ. ಮಂಜುನಾಥ, ವಿ.ಎ. ಶ್ರೀನಾಥ, ಜಿ. ಶಿವಕುಮಾರ್‌ ಬಂಧಿತರು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ₹25,560 ನಗದು ಹಾಗೂ 52 ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗಡಿಗವಾರಪಲ್ಲಿ, ಮೋಟಮಾಕಲಹಳ್ಳಿ, ಧರ್ಮವಾರಪಳ್ಳಿ, ಟಿ. ದೇವಪಲ್ಲಿ ಹಾಗೂ ಏನಿಗದಲೆ ಗ್ರಾಮದ ನಿವಾಸಿಗಳು.

ಗ್ರಾಮದ ಕೆರೆ ಅಂಗಳದಲ್ಲಿ ಗುಂಪು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಶ್ಯಾಮಲ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಅಂದರ್‌–ಬಾಹರ್‌ ಆಡುತ್ತಿದ್ದವರು ಪೊಲೀಸರನ್ನು ಕಂಡೊಡನೆ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಬಿಸಾಡಿ ಪರಾರಿಯಾಗಲು ಯತ್ನಿಸಿದರು. ಅವರನ್ನು ಸುತ್ತುವರಿದು 8 ಮಂದಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.