ಕಾಸರಗೋಡು: ಬಾಲಕನೋರ್ವ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಬಂದ್ಯೋಡು ಸಮೀಪದ ಕೊಕ್ಕೆಜಾಲ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಕೊಕ್ಕೆಜಾಲ್ ನ ಸಾದತ್ ಎಂಬುವವರ ಪುತ್ರ ಸುಲ್ತಾನ್ (7) ಮೃತಪಟ್ಟ ಬಾಲಕ. ಮನೆ ಸಮೀಪ ಆಟವಾಡುತ್ತಿದ್ದ ಸುಲ್ತಾನ್ ನಾಪತ್ತೆಯಾಗಿದ್ದನು. ಇದರಿಂದಾಗಿ ಮನೆಯವರು ಗಾಬರಿಗೊಂಡು ಶೋಧ ನಡೆಸಿದರೂ ಬಾಲಕನ ಸುಳಿವು ಪತ್ತೆಯಾಗಲಿಲ್ಲ. ಬಳಿಕ ಸಮೀಪದ ತೋಡಿನಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಸಂಶಯ ಉಂಟಾಯಿತು.

ನಂತರ ಘಟನಾ ಸ್ಥಳಕ್ಕೆ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಹಾಗೂ ಸ್ಥಳೀಯರು ಶೋಧ ನಡೆಸಿದ್ದಾರೆ. ಈ ವೇಳೆ ಮನೆಯಿಂದ 500 ಮೀಟರ್ ದೂರದ ತೋಡಿನ ಬದಿಯ ಪೊದೆಯಲ್ಲಿ ಬಾಲಕ ಸಿಲುಕಿರುವುದು ಪತ್ತೆಯಾಗಿದೆ. ಕೂಡಲೇ ಬಂದ್ಯೋಡಿನ ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ಯಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದನು.

ಮನೆ ಸಮೀಪವೇ ತೋಡು ಹಾದುಹೋಗುತ್ತಿದ್ದು, ಆಕಸ್ಮಿಕವಾಗಿ ಬಾಲಕ ತೋಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸುಲ್ತಾನ್ ಉಪ್ಪಳ ನಯಾಬಜಾರ್ ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ.