ಹೈದರಾಬಾದ್: ತೆಲಂಗಾಣದಲ್ಲಿ ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಶನಿವಾರ ಒಂದೇ ದಿನ ರಾಜ್ಯದ ವಿವಿಧೆಡೆ 51 ಜನರು ಸಾವನ್ನಪ್ಪಿದ್ದಾರೆ. ವಾರಂಗಲ್ ಜಿಲ್ಲೆಯಲ್ಲಿ ಅತಿ ಹೆಚ್ಚು, 23 ಜನರು ಸಾವನ್ನಪ್ಪಿದ್ದಾರೆ.
ಕರೀಂನಗರ ಜಿಲ್ಲೆಯಲ್ಲಿ 11, ಖಮ್ಮಂನಲ್ಲಿ 7, ಆದಿಲಾಬಾದ್ ಮತ್ತು ನಲ್ಗೊಂಡದಲ್ಲಿ ತಲಾ ಐವರು ಅಸುನೀಗಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಓರ್ವ ವ್ಯಕ್ತಿ ಬಿಸಿಲಿನ ಹೊಡೆತದಿಂದ ಬಳಲಿ ಪ್ರಾಣ ಕಳೆದುಕೊಂಡ ಕುರಿತು ವರದಿಯಾಗಿದೆ.
ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಘೋಷಿಸಿದ್ದಾರೆ.ಮವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತ ಚರ್ಚೆಗೆ ಸಚಿವ ರೆಡ್ಡಿ ಸಚಿವಾಲಯದಲ್ಲಿ ತುರ್ತು ಸಭೆ ನಡೆಸಿದರು.
ಅತಿ ಹೆಚ್ಚು ತಾಪಮಾನ ದಾಖಲಾಗುವ ತಾಲೂಕುಗಳು ಮತ್ತು ಗ್ರಾಮಗಳನ್ನು ಗುರುತಿಸಬೇಕು ಮತ್ತು ಅಲ್ಲಿನ ಜನರಿಗೆ ಮುನ್ನೆಚ್ಚಚ್ಚರಿಕೆಗಳನ್ನು ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯಾದ್ಯಂತ ತಾಪಮಾನ ಅಪಾಯಕಾರಿಯಾಗಿ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆ ಹೊರ ಹೋಗುವುದನ್ನು ತಪ್ಪಿಸಿ. ತೀರಾ ಅವಶ್ಯ ಅನ್ನಿಸಿದರೆ ಮಾತ್ರ ತೆರಳಿ. ಸಾಕಷ್ಟು ನೀರು ಕುಡಿಯಿರಿ. ಬಿಸಿಲಿಗೆ ಒಡ್ಡಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತೆಲಂಗಾಣದ 15 ಜಿಲ್ಲೆಗಳಲ್ಲಿ 45 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಕೊಥಗುಡೆಮ್ ಜಿಲ್ಲೆಯಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 46.3 ಡಿಗ್ರಿ ದಾಖಲಾಗಿದೆ. ಶುಕ್ರವಾರ ಬೆಂಕಿ ಬಿಸಿಲಿಗೆ 34 ಜನರು ಸಾವನ್ನಪ್ಪಿದ್ದರು.
ಆಂಧ್ರದಲ್ಲೂ 16 ಮಂದಿ ಬಲಿ: ಆಂಧ್ರ ಪ್ರದೇಶದಲ್ಲೂ ಶನಿವಾರ ಒಂದೇ ದಿನದಲ್ಲಿ 16 ಮಂದಿ ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ಇವುಗಳಲ್ಲಿ 12 ಸಾವುಗಳು ಎನ್‌ಟಿಆರ್, ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಭವಿಸಿವೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಶನಿವಾರ, ಕೃಷ್ಣಾ ಜಿಲ್ಲೆಯ ಕನುಮೋಲುವಿನಲ್ಲಿ 45.8 ಡಿಗ್ರಿ ಮತ್ತು ಮಕವರಪಲೆಂನಲ್ಲಿ (ಅನಕಪಲ್ಲಿ ಜಿಲ್ಲೆ) 45.5 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದ 13 ಜಿಲ್ಲೆಗಳ 95 ತಾಲೂಕುಗಳಲ್ಲಿ 42 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಇನ್ನು ಇಂದು 21 ತಾಲೂಕುಗಳಲ್ಲಿ ತೀವ್ರ ಬಿಸಿಲಿನ ವಾತಾವರಣ ಏರುವ ಸಾಧ್ಯತೆ ಇದೆ. ಆದರೆ 214 ತಾಲೂಕುಗಳಲ್ಲಿ ಬಿಸಿಗಾಳಿಯು ಪ್ರಭಾವ ಬೀರುವ ನಿರೀಕ್ಷೆಯಿದೆ. ಏಲೂರು, ಕೃಷ್ಣಾ, ಎನ್‌ಟಿಆರ್, ಗುಂಟೂರು, ಬಾಪಟ್ಲಾ, ಪಲ್ನಾಡು, ಮಾರ್ಕಾಪುರಂ, ಪ್ರಕಾಶಂ, ಶ್ರೀ ಪೊರೆಟ್ಟಿ ಶ್ರೀರಾಮುಲು ಮೇಲ್ಮೈನ ಕೆಲವು ಪ್ರದೇಶಗಳಲ್ಲಿ 45 ರಿಂದ 46 ಡಿಗ್ರಿಗಳವರೆಗೆ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ಛತ್ತೀಸ್‌ಗಢ ಮತ್ತು ಒಡಿಶಾದಿಂದ ಉತ್ತರ ಆಂಧ್ರದವರೆಗೆ ಮುಂದುವರಿದಿದ್ದು, ನಂದ್ಯಾಲ್, ಅನಂತಪುರ, ಶ್ರೀ ಸತ್ಯಸಾಯಿ, ವೈಎಸ್‌ಆರ್ ಕಡಪ, ಅನ್ನಮಯ್ಯ, ಪಾರ್ವತಿಪುರಂ ಮಾನ್ಯಂ ಮತ್ತು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಗಳಲ್ಲಿ ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

