ಚೆನ್ನೈ: ರಸಗೊಬ್ಬರ ಬೆರೆಸಿದ ನೀರನ್ನು ಸೇವಿಸಿ 40 ಮೇಕೆಗಳು ಸಾವನ್ನಪ್ಪಿದ ಘಟನೆ ತಮಿಳುನಾಡಿನ ತೊಂಡಮುತ್ತೂರು ಬಳಿಯ ಕಾಳಿಮಂಗಲಂ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಾಳೆ ತೋಪಿನಲ್ಲಿ ರಸಗೊಬ್ಬರ ಬೆರೆಸಿದ್ದ ನೀರನ್ನು ಸೇವಿಸಿ 40 ಮೇಕೆಗಳು ಪ್ರಾಣ ಬಿಟ್ಟಿವೆ. ಈ ಮೇಕೆಗಳು ಕಾಳಿಮಂಗಲಂ ವಸಾಹತು ಪ್ರದೇಶದ ಸಾವಿತ್ರಿ, ವಿಜಯ, ಕಣ್ಣಮ್ಮ ಹಾಗೂ ಮಂಗಳಂ ಎಂಬ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಸೇರಿದ್ದು ಎನ್ನಲಾಗಿದೆ. ಈ ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಮೇಕೆಗಳು ಬೆಟ್ಟ ಪ್ರದೇಶದಲ್ಲಿ ಮೇವು ತಿಂದ ಬಳಿಕ ಮಾಲೀಕರೊಂದಿಗೆ ಬಾಳೆ ತೋಟದ ಮೂಲಕ ಹಾದು ಹೋಗಬೇಕಿತ್ತು. ಆದರೆ ತೋಟದ ಬಳಿ ನೀರಾವರಿ ಕಾಲುವೆಯಲ್ಲಿ ಹರಿಯುತ್ತಿದ್ದ ನೀರನ್ನು ಮೇಕೆಗಳು ಸೇವಿಸಿವೆ. ಇದರಿಂದಾಗಿ ಕೆಲವು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೂ ಕೆಲವು ಅಸ್ವಸ್ಥವಾಗಿದ್ದರು.
ತಕ್ಷಣ ಅಲ್ಲಿದ್ದ ಮಹಿಳೆಯರು ಪಶು ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ರಸಗೊಬ್ಬರ ಮಿಶ್ರಿತ ನೀರನ್ನು ಸೇವಿಸಿದ್ದರಿಂದ ಅವುಗಳ ಸಾವಾಗಿದೆ ಎಂದು ತಿಳಿಸಿದ್ದಾರೆ.

