ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 240 ಕ್ಷೇತ್ರಗಳಿಗೆ ಕುಸಿದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಬಲ್ಯ ಕಡಿಮೆಯಾಗಿದೆ.

ನರೇಂದ್ರ ಮೋದಿ ಅವರು ಸೋಮವಾರ 71 ಸಂಸದರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಪ್ರಮುಖ 4 ನಾಲ್ಕು ಖಾತೆಗಳು ಬಿಜೆಪಿ ಬಳಿಯೇ ಉಳಿದಿವೆ.

ಕೇಂದ್ರ ಗೃಹ ಖಾತೆಯನ್ನು ಅಮಿತ್‌ ಶಾ ಅವರಿಗೆ, ಹಣಕಾಸು ಖಾತೆಯನ್ನು ನಿರ್ಮಲಾ ಸೀತಾರಾಮನ್‌, ರಕ್ಷಣಾ ಖಾತೆಯನ್ನು ರಾಜನಾಥ್‌ ಸಿಂಗ್‌ ಹಾಗೂ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಖಾತೆಯನ್ನು ನಿತಿನ್‌ ಗಡ್ಕರಿ ಅವರಿಗೇ ನೀಡುವ ಮೂಲಕ ನರೇಂದ್ರ ಮೋದಿ ಅವರು ಮೊದಲಿನಂತೆಯೇ ಬಿಜೆಪಿ ಬಳಿಯೇ ಉಳಿಸಿಕೊಳ್ಳುವ ಮೂಲಕ ಚಾಣಾಕ್ಷತನ ಮೆರೆದಿದ್ದಾರೆ. ಅಷ್ಟೇ ಅಲ್ಲ, ಮೈತ್ರಿ ಸರ್ಕಾರದ ಮೇಲೆಯೂ ತಮ್ಮ ಹಿಡಿತ ಇದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಮೈತ್ರಿ ಸರ್ಕಾರ ರಚನೆಗೂ ಮೊದಲು, ನಿತೀಶ್‌ ಕುಮಾರ್‌ ಹಾಗೂ ಟಿಡಿಪಿ ಸೇರಿ ಮೈತ್ರಿ ಪಕ್ಷಗಳಿಗೇ ಪ್ರಮುಖ ನಾಲ್ಕು ಖಾತೆಗಳಲ್ಲಿ ಒಂದಷ್ಟನ್ನು ಮೋದಿ ನೀಡಬೇಕಾಗುತ್ತದೆ. ಅದರಲ್ಲೂ ಗೃಹ ಖಾತೆ ಹಾಗೂ ಹಣಕಾಸು ಖಾತೆಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು.

ಮೊದಲ ಹಾಗೂ ಎರಡನೇ ಅವಧಿಯಂತೆ, ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಅವರು ಪ್ರಮುಖ ಖಾತೆಗಳನ್ನು ಬಿಜೆಪಿ ಬಳಿಯೇ ಉಳಿಸಿಕೊಳ್ಳುವ ಮೂಲಕ ತಮ್ಮ ಹಿಡಿತವನ್ನು ಸಾಬೀತುಪಡಿಸಿದ್ದಾರೆ.