ಮುಂಬೈ: ಮುಂಬೈಗೆ ಬರುವ ಫ್ಲೆಮಿಂಗೋ ಪಕ್ಷಿಗಳೇ ಜನರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅದನ್ನು ನೋಡಲು ಎಲ್ಲೆಲ್ಲಿಂದಲೋ ಜನರು ಆಗಮಿಸುತ್ತಾರೆ. ಆದರೆ ಏಕಾಏಕಿ 30ಕ್ಕೂ ಅಧಿಕ ಫ್ಲೆಮಿಂಗೋಗಳು ಸಾವನ್ನಪ್ಪಿರುವುದು ಆತಂಕ ಸೃಷ್ಟಿಮಾಡಿತ್ತು.
ಮುಂಬೈನ ಘಾಟ್‌ಕೋಪರ್‌ನ ಪಂತ್‌ನಗರದ ಲಕ್ಷ್ಮಿ ನಗರ ಪ್ರದೇಶದಲ್ಲಿ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಫ್ಲೆಮಿಂಗೋಗಳು ಸಾವನ್ನಪ್ಪಿವೆ. ಘಾಟ್ಕೋಪರ್ ಪೂರ್ವ ಪ್ರದೇಶದ ರಸ್ತೆಯಲ್ಲಿ ಫ್ಲೆಮಿಂಗೊ ಪಕ್ಷಿಗಳ ಮೃತ ದೇಹಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿವೆ.
ಈ ಫ್ಲೆಮಿಂಗೊಗಳ (ಫ್ಲೆಮಿಂಗೊ ಪಕ್ಷಿಗಳು) ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಫ್ಲೆಮಿಂಗೋಗಳ ಹಿಂಡು ಆಕಾಶದಲ್ಲಿ ಹಾರಾಡುತ್ತಿದ್ದಾಗ ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಸಾಧ್ಯತೆಯನ್ನು ಪಕ್ಷಿ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.
ಮುಂಬೈಗೆ ಬರುವ ಗುಲಾಬಿ ಬಣ್ಣದ ಫ್ಲೆಮಿಂಗೋಗಳು ಪಕ್ಷಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಸೋಮವಾರ ರಾತ್ರಿ ಘಾಟ್‌ಕೋಪರ್ ಅಂಧೇರಿ ಸಂಪರ್ಕ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸತ್ತ ಫ್ಲೆಮಿಂಗೋಗಳು ಮತ್ತು ಅವುಗಳ ಛಿದ್ರಗೊಂಡ ದೇಹಗಳು ಆಕಾಶದಿಂದ ಬಿದ್ದಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

