ಕೊನಾಕ್ರಿ: ಭಾರಿ ಮಳೆಯಿಂದ ಗುಡಿಸಲುಗಳ ಮೇಲೆ ಕಸದ ಬೃಹತ್ ಗುಡ್ಡ ಕುಸಿದು ಬಿದ್ದ ಪರಿಣಾಮ ಗಿನಿಯಾ ರಾಜಧಾನಿ ಕೊನಾಕ್ರಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ನಗರದ ದಾರ್ ಎಲ್ ಸಲಾಂ ಪ್ರದೇಶದಲ್ಲಿರುವ ಪ್ರಮುಖ ಕಸದ ವಿಲೇವಾರಿ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ.
ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯ ಬಳಿಕ ಸುಮಾರು 2 ಗಂಟೆ ವೇಳೆಗೆ ಕಸದ ರಾಶಿ ಕುಸಿದಿದೆ. ವರ್ಷಗಳಿಂದ ಒಂದೇ ಸ್ಥಳದಲ್ಲಿ ಸಂಗ್ರಹವಾಗಿದ್ದ ಕಸದ ಭಾರ ತಡೆಯಲಾಗದೆ ಕುಸಿದಿದ್ದು, ಪಕ್ಕದಲ್ಲಿದ್ದ ತಾತ್ಕಾಲಿಕ ಮನೆಗಳ ಮೇಲೆ ಹರಿದುಬಂದಿದೆ. ಬಹುತೇಕ ನಿವಾಸಿಗಳು ನಿದ್ರೆಯಲ್ಲಿದ್ದ ಕಾರಣ ಏಕಾಏಕಿ ಸಂಭವಿಸಿದ ದುರಂತದಿಂದ ಹೊರಬರಲು ಸಾಧ್ಯವಾಗಿಲ್ಲ.
ಕಸದ ಅವಶೇಷಗಳಡಿ ಸಿಲುಕಿದವರನ್ನು ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಿಲಿಟರಿ ಎಂಜಿನಿಯರಿಂಗ್ ತಂಡಗಳೂ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಜೆಸಿಬಿ ಸೇರಿದಂತೆ ಭಾರೀ ಯಂತ್ರಗಳನ್ನು ಬಳಸಿ ಕಸ ತೆರವುಗೊಳಿಸಲಾಗುತ್ತಿದೆ. ದುರಂತದಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಡಂಪಿಂಗ್ ಯಾರ್ಡ್ ಸುತ್ತಮುತ್ತ ವಾಸಿಸುವವರಿಗೆ ಅಪಾಯದ ಬಗ್ಗೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದರು. ಸ್ಥಳವನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ ಬಳಿಕ ಹಲವು ಕುಟುಂಬಗಳು ಬೇರೆಡೆಗೆ ತೆರಳಿದ್ದವು. ಆದರೆ ಜೀವನೋಪಾಯದ ಕೊರತೆ ಮತ್ತು ವಸತಿ ಸಮಸ್ಯೆಯಿಂದ ಕೆಲವು ಕುಟುಂಬಗಳು ಅಲ್ಲೇ ಉಳಿದುಕೊಂಡಿದ್ದವು. ದುರಂತದ ಬಳಿಕ ಉಳಿದ ಕುಟುಂಬಗಳನ್ನೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

