ನವದೆಹಲಿ: ಕೋಚಿಂಗ್‌ ಸೆಂಟರ್‌ಗೆ ಮಳೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ದೆಹಲಿಯ ಹಳೇ ರಾಜೇಂದ್ರ ನಗರದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್‌ ಸೆಂಟರ್‌ ಮಾಲೀಕ ಹಾಗೂ ಸಂಯೋಜಕನನ್ನ ದೆಹಲಿ ಪೊಲೀಸರು ಬಂಧಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಕೋಚಿಂಗ್‌ ಸೆಂಟರ್‌ ಮಾಲೀಕ ಅಭಿಷೇಕ್‌ ಗುಪ್ತಾ ಹಾಗೂ ಸಂಯೋಜಕ ದೇಶ್‌ಪಾಲ್‌ ಸಿಂಗ್‌ ಬಂಧಿತರು. ಕೇರಳ ಮೂಲದ ನವೀನ್‌, ಉತ್ತರ ಪ್ರದೇಶದ ಶ್ರೇಯಾ, ತೆಲಂಗಾಣದ ತಾನಿಯಾ ಮೃತ ವಿದ್ಯಾರ್ಥಿಗಳಾಗಿದ್ದಾರೆ.

ಕೋಚಿಂಗ್‌ ಸೆಂಟರ್‌ನಿಂದ ನೆಲಮಾಳಿಗೆಯಲ್ಲಿ ಪಾರ್ಕಿಂಗ್‌ ಮತ್ತು ಸ್ಟೋರ್‌ ರೂಮ್‌ಗಳಿಗಾಗಿ ಅನುಮತಿ ಪಡೆಯಲಾಗಿತ್ತು. 2 ನೆಲಮಾಳಿಗೆಗಳನ್ನ ಪಾರ್ಕಿಂಗ್ ಮತ್ತು ಸ್ಟೋರ್‌ ರೂಮ್‌ಗಾಗಿ ಇದೇ ತಿಂಗಳ ಜುಲೈ 9ರಂದು ಎನ್‌ಒಸಿ ಪಡೆದುಕೊಂಡಿತ್ತು. ಆದರೆ ನಿಯಮಕ್ಕೆ ವಿರುದ್ಧವಾಗಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಈ ಗ್ರಂಥಾಲದಲ್ಲಿ 7 ವಿದ್ಯಾರ್ಥಿಗಳು ಓದುತ್ತಿದ್ದಾಗ ಏಕಾಏಕಿ ನೀರು ನುಗ್ಗಿದ ಪರಿಣಾಮ, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.