ನವದೆಹಲಿ: ಅನೇಕ ಭಾರತೀಯರು ಇರಾನ್‌ನಲ್ಲಿ ಸಿಲುಕಿಕೊಂಡಿದ್ದು, ಅಪರೇಷನ್ ಸಿಂಧು ಮೂಲಕ ಅವರನ್ನ ಸಂರಕ್ಷಣೆ ಮಾಡಲಾಗುತ್ತಿದೆ. ಈ ಅಪರೇಷನ್ ಮೂಲಕ ಭಾರತೀಯರನ್ನ ಮಾತ್ರವಲ್ಲದೇ, ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳನ್ನ ಸಹ ರಕ್ಷಣೆ ಮಾಡಲಾಗುತ್ತಿದೆ.
ಭಾನುವಾರ ರಾತ್ರಿ 285 ಜನ ಭಾರತೀಯರಿರುವ ವಿಮಾನ ದೆಹಲಿಗೆ ಬಂದಿಳಿದಿದ್ದು, ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಜನರನ್ನ ಸ್ವಾಗತಿಸಿದ್ದಾರೆ. ಸರ್ಕಾರದ ಆಪರೇಷನ್ ಸಿಂಧು ಅಡಿಯಲ್ಲಿ ಇರಾನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾದ ಭಾರತೀಯರ ಎಂಟನೇ ಬ್ಯಾಚ್ ಇದಾಗಿದ್ದು, ಈ ಕಾರ್ಯಾಚರಣೆಯ ಅಡಿಯಲ್ಲಿ ಸರ್ಕಾರ ಇಲ್ಲಿಯವರೆಗೆ 1,713 ಜನರನ್ನು ಸ್ಥಳಾಂತರಿಸಿದೆ. ಆಪರೇಷನ್ ಸಿಂಧು ಅಡಿಯಲ್ಲಿ ಭಾರತೀಯರನ್ನ ರಕ್ಷಿಸುವ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಸರ್ಕಾರ ತಿಳಿಸಿದೆ.
ಇರಾನ್‌ನಿಂದ ಸುರಕ್ಷಿತವಾಗಿ ಅನೇಕ ರಾಜ್ಯದ ಜನರು ಬಂದಿಳಿದಿದ್ದಾರೆ. ತಮ್ಮನ್ನ ತಾಯ್ನಾಡಿಗೆ ಮರಳಿ ಕರೆತಂದಿದ್ದಕ್ಕೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮ ಸರ್ಕಾರ, ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅನೇಕ ಜನರು ಹೇಳಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ನ ಪರಮಾಣು ಮೂಲಸೌಕರ್ಯ, ಮಿಲಿಟರಿ ನೆಲೆಗಳು ಮತ್ತು ಹಿರಿಯ ಕಮಾಂಡರ್ಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಜೂನ್ 13 ರಂದು ‘ಆಪರೇಷನ್ ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿದ ನಂತರ ಈ ಸಂಘರ್ಷ ಶುರುವಾಗಿದ್ದು, ಇರಾನ್ ‘ಆಪರೇಷನ್ ಟ್ರೂ ಪ್ರಾಮಿಸ್ 3 ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

