ನವದೆಹಲಿ: ಕರ್ನಾಟಕದ ಗ್ರಾಮೀಣ ಪ್ರದೇಶದ ಸಂಪರ್ಕ ವ್ಯವಸ್ಥೆ ಬಲಪಡಿಸಲು ಮತ್ತು ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪಿಎಂ-ಜನ್​ಮಾನ್ ಯೋಜನೆ ಅಡಿಯಲ್ಲಿ 25.1796 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. 23.766 ಕಿಮೀ ವ್ಯಾಪ್ತಿಯ 18 ರಸ್ತೆಗಳು ಮತ್ತು 2 ಸೇತುವೆಗಳ ಕಾಮಗಾರಿಗಾಗಿ ಈ ಅನುದಾನ ಘೋಷಣೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಮೂಲಕ, ದೂರದ ಹಳ್ಳಿಗಳು ಮತ್ತು ನಗರ ಕೇಂದ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡಲಾಗುವುದು. ಈ ಮೂಲಕ ಬುಡಕಟ್ಟು ಕುಟುಂಬಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿ, ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುವುದು, ಆರೋಗ್ಯ, ಶಿಕ್ಷಣ ಮತ್ತು ಮಾರುಕಟ್ಟೆಗಳಂತಹ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶ ಈ ಅನುದಾನ ಘೋಷಣೆಯ ಹಿಂದಿದೆ ಎಂದು ಸಚಿವಾಲಯ ಹೇಳಿದೆ.