ಅಯೋಧ್ಯೆ: ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರಕ್ಕೆ ದೇಶ-ವಿದೇಶಗಳ ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಹರಿದುಬರುತ್ತಿದೆ. ಆದರೆ, ಈ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಾರಿಗೊಳಿಸಿರುವ ಹೊಸ ಸುರಕ್ಷತಾ ನಿಯಮಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿವೆ. ಟ್ರಸ್ಟ್‌ನ ಅತ್ಯಂತ ಕಠಿಣ ನಿಯಮಗಳಿಗೆ ಬೇಸತ್ತು ಬ್ಯಾಂಕ್‌ನಿಂದ ನಿಯೋಜನೆಗೊಂಡಿದ್ದ 23 ಮಂದಿ ಸಿಬ್ಬಂದಿ ತಮ್ಮ ಕೆಲಸಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಬರುವ ನಗದು ಮತ್ತು ಚಿನ್ನಾಭರಣಗಳನ್ನು ಎಣಿಸುವ ಸಿಬ್ಬಂದಿಗಾಗಿ ಟ್ರಸ್ಟ್ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಕಾಣಿಕೆ ಎಣಿಸುವ ಸಿಬ್ಬಂದಿ ಯಾವುದೇ ಕಾರಣಕ್ಕೂ ಜೇಬುಗಳಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಕೇವಲ ಜೇಬಿಲ್ಲದ ವಿಶೇಷ ಉಡುಪುಗಳನ್ನು ಧರಿಸಿ ಮಾತ್ರ ಎಣಿಕೆ ಕೊಠಡಿಗೆ ಪ್ರವೇಶಿಸಬೇಕು.

ಎಣಿಕೆ ಕೋಣೆಗೆ ಒಳಗೆ ಹೋಗುವಾಗ ಮತ್ತು ಹೊರಬರುವಾಗ ಪೊಲೀಸರು ಸಿಬ್ಬಂದಿಯನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಾರೆ. ಒಳಗೆ ಹೋಗುವಾಗ ಬೆಲ್ಟ್, ಪರ್ಸ್ ಅಥವಾ ಯಾವುದೇ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯಲು ಅನುಮತಿಯಿಲ್ಲ. ಇಡೀ ಕೊಠಡಿಯು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತದೆ.

ರಾಮಮಂದಿರದ ದೇಣಿಗೆಯನ್ನು ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ವಿವಿಧ ಬ್ಯಾಂಕುಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಪೊಲೀಸರ ತಪಾಸಣಾ ಶೈಲಿ ತಮಗೆ ಮಾಡಿದ ಅವಮಾನ ಮತ್ತು ಕಿರುಕುಳ ಎಂದು ಭಾವಿಸಿರುವ ನೌಕರರು, ಭದ್ರತೆಯ ಹೆಸರಿನಲ್ಲಿ ನಮ್ಮ ಪ್ರಾಮಾಣಿಕತೆಯನ್ನು ಶಂಕಿಸಲಾಗುತ್ತಿದೆ ಎಂದು ದೂರಿದ್ದಾರೆ.

ರಾಜೀನಾಮೆ ನೀಡಿರುವ ಸಿಬ್ಬಂದಿಗಳು ಕೇವಲ ಭದ್ರತಾ ನಿಯಮಗಳಷ್ಟೇ ಅಲ್ಲದೆ, ತಮ್ಮ ಸೇವಾ ಸೌಲಭ್ಯಗಳ ವಿಚಾರವಾಗಿಯೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಿಂದೆ ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿದ್ದ ಹಣ ಎಣಿಕೆ ಕೆಲಸವನ್ನು ಈಗ ಒಂದೇ ಪಾಳಿಗೆ ಇಳಿಸಲಾಗಿದೆ. ಇದರಿಂದಾಗಿ ಕರ್ತವ್ಯದ ಸಮಯವನ್ನು 6 ಗಂಟೆಯಿಂದ 9 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಮಾಸಿಕ ಸಂಬಳವನ್ನು ಕಡಿಮೆ ಮಾಡಲಾಗಿದೆ. ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ವಿಭಿನ್ನ ಉದ್ಯೋಗಿಗಳಿಗೆ ವಿಭಿನ್ನ ವೇತನ ನೀಡಲಾಗುತ್ತಿದೆ ಹಾಗೂ ಮಾಸಿಕ ರಜೆಗಳನ್ನು ಮೊಟಕುಗೊಳಿಸಲಾಗಿದೆ.

ಮಂದಿರಕ್ಕೆ ಪ್ರತಿದಿನ ಭಾರಿ ಪ್ರಮಾಣದ ನಗದು ಕಾಣಿಕೆ ಬರುವುದರಿಂದ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಹಣ ದುರುಪಯೋಗ ನಡೆಯಬಾರದು ಎಂಬುದು ಟ್ರಸ್ಟ್‌ನ ಉದ್ದೇಶವಾಗಿದೆ. ಈ ಹಿಂದೆ ಕೆಲವು ದೇಣಿಗೆ ದುರುಪಯೋಗದ ವದಂತಿಗಳು ಕೇಳಿ ಬಂದಿದ್ದರಿಂದ ಈ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಮಂಡಳಿ ಸಮರ್ಥಿಸಿಕೊಂಡಿದೆ.

ಇದರ ಜೊತೆಗೆ, ಈ ಹಿಂದೆ ಸ್ವಚ್ಛತಾ ಸಿಬ್ಬಂದಿಯನ್ನೂ ದೇಣಿಗೆ ಎಣಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಅವರನ್ನು ಅವರ ಮೂಲ ಕರ್ತವ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸದ್ಯ ರಾಜೀನಾಮೆ ನೀಡಿರುವ ಸಿಬ್ಬಂದಿಗಳ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದ್ದು, ಕಠಿಣ ನಿಯಮಗಳ ನಡುವೆಯೇ ದೇಣಿಗೆ ಎಣಿಕೆ ಕಾರ್ಯ ಮುಂದುವರಿದಿದೆ.

ಭವಿಷ್ಯದಲ್ಲಿ ಮಾನವ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ತಡೆಗಟ್ಟಲು ಟ್ರಸ್ಟ್ ನಿರ್ಧರಿಸಿದೆ. ಇನ್ನುಮುಂದೆ ಬ್ಯಾಂಕ್ ಅಧಿಕಾರಿಗಳು ಕೈಯಿಂದ ಹಣ ಎಣಿಸುವುದನ್ನು ನಿಲ್ಲಿಸಿ, ಹೈಟೆಕ್ ನೋಟು ಎಣಿಕೆ ಯಂತ್ರಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲು ಬೃಹತ್ ಯೋಜನೆ ರೂಪಿಸಲಾಗುತ್ತಿದೆ.