ಪುಣೆ: ಬಾಸ್ಕೆಟ್‌ಬಾಲ್ ಸ್ಟ್ಯಾಂಡ್‌ತಲೆಗೆ ಬಿದ್ದು 20 ವರ್ಷದ ಯುವಕನೊಬ್ಬ ಸಾವನಪ್ಪಿರುವ ಘಟನೆ ಪುಣೆಯ ಮೆರೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

ಸೆಕೆಂಡ್‌ ಇಯರ್‌ ವಿದ್ಯಾರ್ಥಿ ವಿಶಾಲ್ ವರ್ಮಾ ನಿನ್ನೆ ಬೆಳಿಗ್ಗೆ ಕ್ಯಾಂಪಸ್ ನಲ್ಲಿ ವಾಕ್ ಮತ್ತು ವ್ಯಾಯಾಮ ಮಾಡಲು ಹೊರಗೆ ಬಂದಿದ್ದರು. ಬಾಸ್ಕೆಟ್‌ಬಾಲ್ ಹೂಪ್ ನಲ್ಲಿ ಪುಲ್-ಅಪ್ ಮಾಡುತ್ತಿದ್ದಾಗ ಇಡೀ ಫ್ರೇಮ್ ಅವರ ಮೇಲೆ ಕುಸಿದು ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದವು. ಕ್ಯಾಂಪಸ್ ನಲ್ಲಿದ್ದ ಸಹ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ,ಆದರೆ ಮಾರ್ಗಮಧ್ಯೆ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ.

ಟೋಲಾನಿ ಮ್ಯಾರಿಟೈಮ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲರಾದ ಡಾ. ಸಂಜೀತ್ ಕನುಂಗೊ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಬ್ಯಾಸ್ಕೆಟ್‌ಬಾಲ್ ಹೂಪ್ ಬಳಸಿ ಪುಲ್-ಅಪ್ ಮಾಡಲು ಪ್ರಯತ್ನಿಸುತ್ತಿದ್ದಾಗ ಇಡೀ ಫ್ರೇಮ್ ಅವನ ಮೇಲೆ ಕುಸಿದು ಅವನ ಹಣೆಗೆ ಗಂಭೀರ ಗಾಯವಾಯಿತು. ಏನು ತಪ್ಪಾಯಿತು ಎಂದು ನಾವು ತನಿಖೆ ಮಾಡುತ್ತೇವೆ” ಎಂದಿದ್ದಾರೆ.

ಫ್ರೇಮ್ ತುಕ್ಕು ಹಿಡಿದಿದೆಯೇ ಅಥವಾ ಫಿಟ್ಟಿಂಗ್‌ಗಳಲ್ಲಿ ದೋಷವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ಸಂತೋಷ್ ಪಾಟೀಲ್ ತಿಳಿಸಿದ್ದಾರೆ.