ದೆಹಲಿ: ಜನವರಿಯಿಂದ ಛತ್ತೀಸ್‌ಗಢದಲ್ಲಿ 194 ನಕ್ಸಲರ ಹತ್ಯೆ ಮಾಡಲಾಗಿದೆ. 801 ಮಂದಿಯನ್ನು ಬಂಧಿಸಲಾಗಿದೆ ಮತ್ತು 742 ಮಂದಿ ಶರಣಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

ರಾಜಧಾನಿಯಲ್ಲಿ ಎಡಪಂಥೀಯ ತೀವ್ರಗಾಮಿ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುವಂತೆ ಮನವಿ ಮಾಡಿದರು. ಈಶಾನ್ಯ ಮತ್ತು ಜಮ್ಮು ಕಾಶ್ಮೀರದಲ್ಲಿ ಸುಮಾರು 13,000 ವ್ಯಕ್ತಿಗಳು ಹೀಗೆ ಮಾಡಿದ್ದಾರೆ ಎಂದು ಶಾ ಹೇಳಿದ್ದಾರೆ.

“ನಾನು ಛತ್ತೀಸ್‌ಗಢದ ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿಪಿ ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ. ಜನವರಿಯಿಂದ ಇಲ್ಲಿಯವರೆಗೆ 194 ನಕ್ಸಲರನ್ನು ಕೊಲ್ಲಲಾಗಿದೆ, 801 ನಕ್ಸಲೀಯರನ್ನು ಬಂಧಿಸಲಾಗಿದೆ ಮತ್ತು 742 ನಕ್ಸಲರು ಶರಣಾಗಿದ್ದಾರೆ” ಎಂದು ಶಾ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ನಕ್ಸಲಿಸಂನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಯುವಕರು ಶಸ್ತ್ರಾಸ್ತ್ರಗಳನ್ನು ತೊರೆದು ಮುಖ್ಯವಾಹಿನಿಗೆ ಬರುವಂತೆ ನಾನು ಮನವಿ ಮಾಡುತ್ತೇನೆ. ಅದು ಈಶಾನ್ಯ ರಾಜ್ಯ ಅಥವಾ ಜಮ್ಮು ಕಾಶ್ಮೀರವೇ ಆಗಿರಲಿ, ಸುಮಾರು 13000 ಜನರು ಆಯುಧವನ್ನು ತೊರೆದು ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಅವರು ಹೇಳಿದರು.