ನವದೆಹಲಿ: ತಿಹಾರ್ ಜೈಲ್ನಲ್ಲಿ 125 ಜನ ಕೈದಿಗಳಿಗೆ ಹೆಚ್ಐವಿ ಪಾಸಿಟಿವ್ ಕಾಣಿಸಿಕೊಂಡಿದೆ. 200 ಕೈದಿಗಳಲ್ಲಿ ಲೈಂಗಿಕತೆಗೆ ಸಂಬಂಧಿತ ರೋಗಗಳು ಇರೋದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು.
ತಿಹಾರ್ ಜೈಲಿನಲ್ಲಿ ಆಗಾಗ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅದರಲ್ಲೂ ತಿಹಾರ್ ಜೈಲಿಗೆ ನೂತನ ಡಿಜಿಯಾಗಿ ಸತೀಶ್ ಗೋಲಾಚ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೇ ಹಾಗೂ ಜೂನ್ನಲ್ಲಿ 10, 500 ಜನ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಲಾಗಿತ್ತು.
ಇದರಲ್ಲಿ ಹೆಚ್ಐವಿ ಪರೀಕ್ಷೆಯೂ ಕೂಡ ಇತ್ತು. ಮೆಡಿಕಲ್ ಸ್ಕ್ರೀನಿಂಗ್ ಬಳಿಕ ಒಟ್ಟು 125 ಕೈದಿಗಳಲ್ಲಿ ಹೆಚ್ಐವಿ ಪಾಸಿಟಿವ್ ಇರೋದು ಕಂಡು ಬಂದಿವೆ. ಜೈಲು ಸಿಬ್ಬಂದಿ ಹೇಳುವ ಪ್ರಕಾರ ಇದರಲ್ಲಿ ಅಚ್ಚರಿಗೊಳ್ಳುವ ವಿಷಯವೇನೂ ಇಲ್ಲ. ಕೈದಿಗಳು ಇಲ್ಲಿಗೆ ಬಂದ ಮೇಲೆ ಹೆಚ್ಐವಿ ಪಾಸಿಟಿವ್ ಕಂಡು ಬಂದಿಲ್ಲ. ಹಲವು ಸಮಯಗಳಲ್ಲಿ ಹೊರಗಿನ ಜಿಲ್ಲೆಗಳಿಂದ ಇಲ್ಲಿಗೆ ಕೈದಿಗಳನ್ನು ಶಿಫ್ಟ್ ಮಾಡಲಾಗುತ್ತದೆ.
ಬಂದ ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ವೇಳೆಯೂ ಕೂಡ ಇವರಲ್ಲಿ ಹೆಚ್ಐವಿ ಪಾಸಿಟಿವ್ ಕಂಡು ಬಂದಿತ್ತು. ಈಗ ಮತ್ತೆ ಹಲವು ಬಾರಿ ಮೆಡಿಕಲ್ ಚೆಕಪ್ ಮಾಡಿ ನೋಡಿದಾಗಲೂ ಕೂಡ ಅವರಲ್ಲಿ ಹೆಚ್ಐವಿ ಇದೆ. ಹೀಗಾಗಿ ಆತಂಕಪಡುವಂತದ್ದು ಏನೂ ಇಲ್ಲ ಎಂದು ಜೈಲು ಸಿಬ್ಬಂದಿ ಹೇಳುತ್ತಾರೆ.

