ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್‌ನ ಪುಲ್ರೈ ಗ್ರಾಮದ ಸತ್ಸಂಗ ಧಾರ್ಮಿಕ ಸಭೆಯೊಂದರಲ್ಲಿ ಇಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 116 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ‘ಸತ್ಸಂಗ’ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಸಂಭವಿಸಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಹತ್ರಾಸ್ ದುರಂತ ಸಂಭವಿಸಿದ ಸ್ಥಳಕ್ಕೆ ಧಾವಿಸುವ ಸಾಧ್ಯತೆಯಿದೆ. “ಹತ್ರಾಸ್‌ನ ಘಟನೆಯು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಸ್ಥಳೀಯ ಸಂಘಟಕರು ‘ಭೋಲೆ ಬಾಬಾ’ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ನಂತರ, ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರನ್ನು ಸ್ಪರ್ಶಿಸಲು ಭಕ್ತ ಸಮೂಹವು ಅವರ ಕಡೆಗೆ ನುಗ್ಗಿತು. ಸ್ವಯಂಸೇವಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಈ ಕಾಲ್ತುಳಿತ ಸಂಭವಿಸಿದೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

