ಉತ್ತರ ಕನ್ನಡ: ನದಿಯಲ್ಲಿ ಕಪ್ಪೆ ಚಿಪ್ಪು (ಮರಕಲ) ತೆಗೆಯಲು ಇಳಿದಿದ್ದ ಒಂದೇ ಗ್ರಾಮದ 10 ಮಂದಿ ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇನ್ನು ಮೂವರು ನದಿಯ ನೀರಿನಲ್ಲಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ನದಿಯಲ್ಲಿ ಇಂದು ನಡೆದಿದೆ.
ಶಿರಾಲಿಯ ಸಾರದಹೊಳೆ ಮೂಲದ ಒಟ್ಟು 14 ಜನರ ತಂಡವೊಂದು ಒಟ್ಟಾಗಿ ವೆಂಕಟಾಪುರ ನದಿಗೆ ಕಪ್ಪೆ ಚಿಪ್ಪುಗಳನ್ನು ಸಂಗ್ರಹಿಸಲು ಹೋಗಿತ್ತು. ನದಿಯ ಆಳವಾದ ಭಾಗಕ್ಕೆ ಇಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ಇವರೆಲ್ಲರೂ ಮುಳುಗಲಾರಂಭಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮೂವರನ್ನು ಸ್ಥಳೀಯರು ಅತ್ಯಂತ ಸಾಹಸದಿಂದ ರಕ್ಷಿಸಿದ್ದು, ಸದ್ಯ ಅವರಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ನದಿಯಲ್ಲಿ ಮುಳುಗಿ ಈಗಾಗಲೇ 10 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ, ನೀರಿನ ರಭಸಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿರುವ ಇನ್ನು ಮೂವರಿಗಾಗಿ ಸ್ಥಳೀಯ ಈಜುಗಾರರು ಹಾಗೂ ರಕ್ಷಣಾ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

