ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಹಲವಾರು ರಸ್ತೆ ಅಪಘಾತಗಳು ನಡೆಯುತ್ತವೆ. ಈ ವೇಳೆ ಗಾಯಗೊಳ್ಳುವ ಮಂದಿಗೆ ಚಿಕಿತ್ಸೆ ನೀಡಲು ಅವರ ಕುಟುಂಬಗಳು ಪರದಾಡುತ್ತಾರೆ. ಇದನ್ನು ಅರಿತಿರುವ ಕೇಂದ್ರ ಸರ್ಕಾರ, ಅಪಘಾತದಲ್ಲಿ ಗಾಯಗೊಂಡವರಿಗೆ 1.5 ಲಕ್ಷ ರೂಪಾಯಿವರೆಗೂ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
ನ್ಯಾಷನಲ್ ಹೆಲ್ತ್ ಅಥಾರಿಟಿ ಹಾಗೂ ರಾಷ್ಟ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಹಯೋಗದಲ್ಲಿ ಯೋಜನೆ ಜಾರಿ ಬರಲಿದೆ. ಅಪಘಾತದ ಗಾಯಾಳುಗಳಿಗೆ ಕ್ಯಾಶ್ ಲೆಸ್ ಚಿಕಿತ್ಸೆ ಸಿಗಲಿದೆ. ಎಲ್ಲಾ ವಿಧದ ವಾಹನಗಳ ಅಪಘಾತ ಸಂತ್ರಸ್ತರಿಗೆ ಕ್ಯಾಶ್ ಲೆಸ್ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ಅಪಘಾತವಾದ ದಿನದಿಂದ 7 ದಿನಗಳವರೆಗೂ 1.5 ಲಕ್ಷ ರೂಪಾಯಿವರೆಗೂ ಫ್ರೀ ಟ್ರೀಟ್ಮೆಂಟ್ ಸಿಗಲಿದೆ. ಅಪಘಾತ ಸಂತ್ರಸ್ತರ ಐ.ಡಿ ಮೂಲಕ ಉಚಿತ ಚಿಕಿತ್ಸೆ ಸಿಗಲಿದೆ. ಅಪಘಾತದಲ್ಲಿ ಗಾಯಗೊಂಡ ಭಾರತದ ಎಲ್ಲ ನಾಗರಿಕರು, ಎನ್‌ಆರ್‌ಐ, ವಿದೇಶಿಯರಿಗೂ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಎಲ್ಲ ರಾಜ್ಯಗಳಿಗೂ ಪತ್ರ ಬರೆದು ನ್ಯಾಷನಲ್ ಹೆಲ್ತ್ ಅಥಾರಿಟಿಯ ಜಂಟಿ ನಿರ್ದೇಶಕ ಡಾಕ್ಟರ್ ಅಕ್ಷಯ್ ಜೈನ್ ಸೂಚನೆ ನೀಡಿದ್ದಾರೆ.

