News Karnataka Kannada
Sunday, April 28 2024
ಮುಂಬೈ

ಬಹರೈನ್: “ಶಶಿಪ್ರಭಾ ಪರಿಣಯ” ಯಕ್ಷಗಾನ ಯಶಸ್ವಿ ಪ್ರದರ್ಶನ

Bahrain: "Shashiprabha Parinaya" Yakshagana successfully performed
Photo Credit : News Kannada

ಬಹರೈನ್: ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಬಹರೈನ್ – ಸೌದಿ ಅರೇಬಿಯ ಘಟಕವು ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ಕಳೆದ ತಾ.೨೮ ಅಕ್ಟೋಬರ್ ರಂದು ತನ್ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಬಹರೈನ್ -ಸೌದಿ ಅರೇಬಿಯದ ಹವ್ಯಾಸಿ ಯಕ್ಷ ಕಲಾವಿದರು ಹಾಗು ನಾಡಿನ ಮೇರು ಕಲಾವಿದರ ಕೂಡುವಿಕೆಯಲ್ಲಿ “ಶಶಿಪ್ರಭಾ ಪರಿಣಯ” ಎಂಬ ಯಕ್ಷಗಾನ ಪ್ರದರ್ಶನವನ್ನು ಆಡಿತೋರಿಸಿದ್ದು ನೆರೆದ ಸುಮಾರು ೮೦೦ಕ್ಕೂ ಹೆಚ್ಚಿನ ಯಕ್ಷಪ್ರೇಮಿಗಳು ಈ ಕಲಾಪ್ರದರ್ಶನವನ್ನು ನೋಡಿ ಸಂತೋಷಪಟ್ಟರು.

ಖ್ಯಾತ ಯಕ್ಷಗಾನ ಕಲಾವಿದ ದೀಪಕ್ ರಾವ್ ಪೇಜಾವರ ರವರು ಪೂರ್ವರಂಗ ಕ್ರಮಗಳ ಬಗ್ಗೆ ಮಾತನಾಡಿದ ನಂತರ ಕುಮಾರಿಯರಾದ ಪ್ರಜ್ಞಾ ಜಗದೀಶ್, ಪೂರ್ವಜಾ ಜಗದೀಶ್, ತೀರ್ಥಾ ಗಣೇಶ್, ಧನ್ವಿ ರಾಮ್ ಪ್ರಸಾದ್ ರವರು ಪೂರ್ವ ರಂಗ ಪ್ರದರ್ಶನದಿಂದ ಎಲ್ಲರ ಮನಸೂರೆಗೊಂಡರು .

ಪಟ್ಲ ಸಂಭ್ರಮದ ಮುಖ್ಯ ಅತಿಥಿಯಾಗಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಕೇಂದ್ರ ಘಟಕದ ಗೌರವಾಧ್ಯಕ್ಷರಾದ ಖ್ಯಾತ ಉದ್ಯಮಿ ಹಾಗು ಸಮಾಜ ಸೇವಕ  ಸದಾಶಿವ ಶೆಟ್ಟಿ ಕನ್ಯಾನ, ವಿಶೇಷ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದುಬೈ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗು ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವೇದಿಕೆಯಲ್ಲಿದ್ದ ಇತರ ಗಣ್ಯರುಗಳೊಂದಿಗೆ ಜ್ಯೋತಿ ಬೆಳಗಿಸಿ ಪಟ್ಲ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಬಹರೈನ್ ಹಾಗು ಸೌದಿ ಘಟಕದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರೆ ,ಗೌರಾವಾಧ್ಯಕ್ಷರಾದ ಸುಭಾಶ್ಚಂದ್ರ ರವರು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸದಾಶಿವ ಶೆಟ್ಟಿ ಕನ್ಯಾನ ರವರನ್ನು  ಸರ್ವೋತ್ತಮ ಶೆಟ್ಟಿ , ಪಟ್ಲ ಸತೀಶ್ ಶೆಟ್ಟಿ, ಗೌರಾವಾಧ್ಯಕ್ಷರಾದ ಸುಭಾಶ್ಚಂದ್ರ, ಪ್ರಕಾಶ್ ಶೆಟ್ಟಿ ಹಾಗು ಉಪಾಧ್ಯಕ್ಷರಾದ ನರೇಂದ್ರ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು ಅಲ್ಲದೆ ಅತಿಥಿ ಕಲಾವಿದರಾದ ಖ್ಯಾತ ಚೆಂಡೆ ಮದ್ದಳೆ ವಾದಕ ಕೌಶಿಕ್ ರಾವ್ ಪುತ್ತಿಗೆ ಹಾಗು ಶರತ್ ಕುಡ್ಲ ರವರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.

ಫೌಂಡೇಶನ್ ನ ಧ್ಯೇಯೋದ್ದೇಶಗಳು, ನಡೆದು ಬಂದ ದಾರಿ ಯ ಬಗ್ಗೆ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಮಾತನಾಡಿದರು.

ತದನಂತರ ಯಕ್ಷ ಪುರುಷೋತ್ತಮ ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ “ಶಶಿಪ್ರಭಾ ಪರಿಣಯ ” ಯಕ್ಷಗಾನವು ಸುಮಾರು ನಾಲ್ಕು ಘಂಟೆಗಳ ಕಾಲ ಪ್ರೇಕ್ಷಕರು ಮಂತ್ರಮುಗ್ಧರಾಗುವಂತೆ ಮಾಡಿತು . ಖ್ಯಾತ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿಯವರ ತಮ್ಮ ಕಂಠ ಮಾಧುರ್ಯದಿಂದ ಎಲ್ಲರನ್ನೂ ರಂಜಿಸಿದರೆ, ಖ್ಯಾತ ಕಲಾವಿದ  ದೀಪಕ್ ಪೇಜಾವರ್ ರವರು ಈ ಯಕ್ಷಗಾನ ಕಥಾ ಪ್ರಸಂಗವನ್ನು ನಿರ್ದೇಶಿಸುವುದರೊಂದಿಗೆ ಸ್ವತಃ ಶಶಿಪ್ರಭಾ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಹಿಮ್ಮೇಳದಲ್ಲಿ ಖ್ಯಾತ ಭಾಗವತ ಯಕ್ಷಧ್ರುವ ಸತೀಶ್ ಪಟ್ಲ ರವರೊಂದಿಗೆ ರೋಶನ್ ಎಸ್ . ಕೋಟ್ಯಾನ್ ರವರು, ಚೆಂಡೆ ಮದ್ದಳೆಯಲ್ಲಿ ನಾಡಿನ ಖ್ಯಾತ ಮದ್ದಳೆ ವಾದಕ ಕೌಶಿಕ್ ರಾವ್ ಪುತ್ತಿಗೆ, ಧನಂಜಯ್ ಕಿನ್ನಿಗೋಳಿ, ಗಣೇಶ್ ಕಟೀಲು, ಚಕ್ರತಾಳದಲ್ಲಿ ರಾಜೇಶ್ ಮಾವಿನ ಕಟ್ಟೆಯವರು, ಮುಮ್ಮೇಳದಲ್ಲಿ ಪದ್ಮಶೇಖರನ ಪಾತ್ರದಲ್ಲಿ ನವೀನ್ ಭಂಡಾರಿ ಕೋಳಾರು, ಮಾರ್ತಾಂಡತೇಜನಾಗಿ ಜೀವಿತೇಶ್ ಪೂಂಜ, ಕಮಲಧ್ವಜನಾಗಿ ಅಭಿಷೇಕ್ ಕಲ್ಲಡ್ಕ, ವಿಜಯ ಸೇನನಾಗಿ ಮೋಹನ್ ಎಡನೀರು, ಭದ್ರಕೇತನಾಗಿ ರಂಜಿತ್ ಶೆಟ್ಟಿ, ಕಿರಾತನಾಗಿ ಸಚಿನ್ ಪಾಟಾಳಿ, ಮುದಿಯಪ್ಪಣ್ಣನಾಗಿ ಗಣೇಶ್ ಕಟೀಲು, ಕಿರಾತ ಪಡೆಯಲ್ಲಿ ರಾಜೇಶ್ ಶೆಟ್ಟಿಗಾರ್,  ಪ್ರಜ್ಞಾ,  ಪೂರ್ವಜಾ, ಧನ್ವಿ, ತೀರ್ಥಾ, ಝಾನ್ಸಿ, ಜಿಂಕೆಮರಿಯಾಗಿ ಪ್ರಾರ್ಥನಾ ಗಣೇಶ್, ಮಾಂಡವ್ಯ ಮುನಿಯಾಗಿ ಪೂರ್ಣಿಮಾ ಜಗದೀಶ್, ಕಮಲಗಂಧಿನಿಯಾಗಿ ಅಜಿತ್ ಕುಮಾರ್,ವನಪಾಲಕಿ ಮುದುಕಿ- ಭಾಸ್ಕರ ಆಚಾರ್ಯ, ವನಪಾಲಕಿಯರು – ಹೇಮಂತ್ ಸಾಲ್ಯಾನ್, ಸಂತೋಷ್ ಆಚಾರ್ಯ, ಭ್ರಮರಕುಂತಳೆಯಾಗಿ ಶರತ್ ಕುಡ್ಲ(ದುಬೈ), ಘೋರರೂಪಿಯಾಗಿ ರಾಮ್‌ಪ್ರಸಾದ್ ಅಮ್ಮೆನಡ್ಕ ಹಾಗು ಶ್ರೀ ದೇವಿ- ಶೋಭಾ ರಾಮ್ ಪ್ರಸಾದ್ ತಮ್ಮ ಕಲಾಪ್ರೌಢಿಮೆಯಿಂದ ರಂಗದಲ್ಲಿ ಮಿಂಚಿದರು .

ಕಾರ್ಯಕ್ರಮದ ಕೊನೆಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮೋಹನ್ ದಾಸ್ ರೈ ಎರುಂಬು ರವರು ಧನ್ಯವಾದಗಳನ್ನು ಅರ್ಪಿಸಿದರು. ಕಮಲಾಕ್ಷ ಅಮೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಕಮಲಾಕ್ಷ ಅಮೀನ್ ,ಬಹರೈನ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು