ತುಳಸಿ ಚಹಾವನ್ನು ನಿತ್ಯವೂ ಸೇವಿಸುವುದರಿಂದ ಉಸಿರಾಟದ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರೆಯುತ್ತದೆ. ಕಫ ಕಟ್ಟಿಕೊಳ್ಳುವ ಸಮಸ್ಯೆ ಇರುವವರಿಗೆ, ಬಹುಬೇಗನೆ ಶೀತ, ನೆಗಡಿಯಂತಹ ಸಮಸ್ಯೆಯಾಗುವ ಮಂದಿಗೆ, ಅಸ್ತಮಾ ತೊಂದರೆ ಇರುವವರಿಗೆ ತುಳಸೀ ಚಹಾ ಉತ್ತಮ.

ಇದು ದೇಹದಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸಿ, ಕಟ್ಟಿಕೊಂಡ ಕಫವನ್ನು ಕರಗಿಸುವಲ್ಲಿ ನೆರವಾಗುವ ಮೂಲಕ ಉಸಿರಾಟವನ್ನು ಸುಗಮವಾಗುವಂತೆ ಮಾಡುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ತುಳಸಿಯ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತುಳಸಿ ಚಹಾ ಕಾರ್ಟಿಸೋಲ್‌ ಹಾರ್ಮೋನಿನ ಸಮತೋಲನಕ್ಕೆ ಸಹಾಯ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಕೊಂಚ ಮಟ್ಟಿನ ಪರಿಹಾರ ನೀಡುತ್ತದೆ.

ನಿತ್ಯವೂ ಕುಡಿಯುವ ಹಾಲು ಹಾಕಿದ ಚಹಾ ಕಾಫಿಗಿಂತ ತುಳಸಿ ಚಹಾ ಒಳ್ಳೆಯದು. ಇದು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರುವಲ್ಲಿಯೂ ನೆರವಾಗುತ್ತದೆ. ತುಳಸಿ ಚಹಾವನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ತುಳಸಿಯು ಬ್ಯಾಕ್ಟೀರಿಯಾಗಳನ್ನು ಓಡಿಸುವ ಕೆಲಸ ಮಾಡುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧವೂ ಕೆಲಸ ಮಾಡುತ್ತದೆ.

ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಮೌತ್‌ ಫ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ. ಬಾಯಿಯ ದುರ್ವಾಸನೆಗೂ ಇದು ಒಳ್ಳೆಯದು. ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ತುಳಸಿ ಚಹಾ ಒಳ್ಳೆಯದು. ತುಳಸಿಯಲ್ಲಿರುವ ಯುಗೆನಾಳ್‌ ಎಂಬ ಎಣ್ಣೆಯಂಶದಲ್ಲಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಇದು ಜೀರ್ಣಾಂಗವ್ಯೂಹ ಹಾಗೂ ದೇಹದ ಗಂಟುಗಳ ಆರೋಗ್ಯದಲ್ಲಿ ಸಹಾಯ ಮಾಡುತ್ತದೆ.

ತುಳಸಿಯ ಜೊತೆಗೆ ಶುಂಠಿ, ಕರಿಮೆಣಸು, ವೀಳ್ಯದೆಲೆ ಇತ್ಯಾದಿಗಳನ್ನೂ ಸೇರಿಸಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಕಷಾಯ ಮಾಡಿಕೊಂಡು ಕುಡಿದರೆ ಎದೆಯಲಲಿ ಕಟ್ಟಿಕೊಂಡ ಕಫ ನೀರಾಗುತ್ತದೆ. ಒಣಕೆಮ್ಮು, ಕಫದ ಜೊತೆಗೆ ಬರುವ ಕೆಮ್ಮು, ಗಂಟಲು ಕೆರೆತ/ನೋವು ಇತ್ಯಾದಿಗಳಿಗೂ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.