ಮೊಳಕೆ ಕಟ್ಟಿದ ಹೆಸರು ಕಾಳು ಸೇವನೆ ಮಾಡುವುದರಿಂದ ದೇಹಕ್ಕೆ ತಕ್ಷಣವೇ ಶಕ್ತಿ ಮತ್ತು ಚೈತನ್ಯ ಸಿಗುತ್ತದೆ. ಹೀಗಾಗಿ ಬೆಳಗಿನ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಟ್ಟಿದ ಹೆಸರು ಕಾಳು ಸೇವನೆ ಮಾಡುವುದು ನಮ್ಮ ದೇಹದಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.
ಹೆಸರುಕಾಳು ನೆನೆಸಿ ಮೊಳಕೆ ಕಟ್ಟಿ ಸೇವನೆ ಮಾಡುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಏಕೆಂದರೆ ಇದು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಗಳನ್ನು ತೊಡೆದುಹಾಕಿ ನಮ್ಮ ದೇಹಕ್ಕೆ ನಾರಿನ ಅಂಶವನ್ನು ಹೆಚ್ಚಾಗಿ ಕೊಡುತ್ತದೆ. ಹೀಗಾಗಿ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಸಕ್ಕರೆ ಕಾಯಿಲೆ ಇರುವವರಿಗೆ ಇದು ಬಹಳ ಅನುಕೂಲಕರ. ಇಡೀ ದಿನ ಶಕ್ತಿ ಹಾಗೂ ಚೈತನ್ಯವನ್ನು ನಿರ್ವಹಣೆ ಮಾಡಿಕೊಳ್ಳಲು ಮೊಳಕೆ ಕಟ್ಟಿದ ಹೆಸರುಕಾಳು ನೆರವಾಗುತ್ತದೆ. ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬೇಕು ಎನ್ನುವವರು ಮೊಳಕೆ ಕಟ್ಟಿದ ಹೆಸರು ಕಾಳು ಸೇವನೆ ಅಭ್ಯಾಸವನ್ನು ಮಾಡಿಕೊಳ್ಳುವುದು ಒಳ್ಳೆಯದು.
ಹೆಸರುಕಾಳುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳಿಗೆ ಯಾವುದೇ ಕೊರತೆ ಇಲ್ಲ. ಈ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳನ್ನು ಹೋಗಲಾಡಿಸಲು ನೆರವಾಗುತ್ತದೆ ಜೊತೆಗೆ ಆಕ್ಸಿಡೇಟಿವ್ ಒತ್ತಡ ಮತ್ತು ಕ್ಯಾನ್ಸರ್ ಹಾಗೂ ಹೃದಯದ ಕಾಯಿಲೆಗಳನ್ನು ಸಹ ದೂರ ಮಾಡುತ್ತವೆ.
ಮೊಳಕೆ ಕಟ್ಟಿದ ಹೆಸರು ಕಾಳುಗಳಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದು ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುವ ಜೊತೆಗೆ ನಮ್ಮ ಸಂಪೂರ್ಣ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಅಷ್ಟು ಮಾತ್ರವಲ್ಲದೆ ಹೆಸರು ಕಾಳುಗಳಲ್ಲಿ ಕಂಡುಬರುವಂತಹ ನಾರಿನ ಅಂಶ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯ ವನ್ನು ನಿರ್ವಹಣೆ ಮಾಡುತ್ತದೆ.
ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಾಗಿರುವ ಮೊಳಕೆ ಕಟ್ಟಿದ ಹೆಸರುಕಾಳು ಸೇವನೆ ಮಾಡುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಆಗಾಗ ನಿಯಮಿತವಾಗಿ ಮೊಳಕೆ ಕಟ್ಟಿದ ಹೆಸರು ಕಾಳುಗಳನ್ನು ಸೇವನೆ ಮಾಡುವುದರಿಂದ ವಿವಿಧ ಬಗೆಯ ಸೋಂಕು ಹಾಗೂ ಸಣ್ಣಪುಟ್ಟ ಕಾಯಿಲೆಗಳಿಂದ ನಾವು ದೂರ ಉಳಿಯಬಹುದು.

