ದಾಳಿಂಬೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಇದು ನಿಮ್ಮ ಸೌಂದರ್ಯ ಹೆಚ್ಚಿಸಲು ಕೂಡ ಬಳಕೆಯಾಗುತ್ತದೆ. ಇದು ತಿನ್ನಲು ಮಾತ್ರವಲ್ಲ, ಮುಖಕ್ಕೆ ಸ್ಕ್ರಬ್ ಆಗಿ ಬಳಸುವುದರಿಂದ ಉತ್ತಮ.
ದಾಳಿಂಬೆ ಹಣ್ಣಿನಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದ್ದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಹಣ್ಣು ಮಾತ್ರವಲ್ಲ ಅದರ ಸಿಪ್ಪೆ, ತೊಗಟೆ, ಹೂವು ಇತ್ಯಾದಿ, ಎಲ್ಲಾ ಭಾಗದಲ್ಲಿಯೂ ಪೌಷ್ಠಿಕಾಂಶದ ಜೊತೆಗೆ ಔಷಧೀಯ ಮೌಲ್ಯಗಳನ್ನು ಹೊಂದಿವೆ.
ಇವುಗಳನ್ನು ಸರಿಯಾದ ವಿಧಾನಗಳಲ್ಲಿ ಬಳಸಿದರೆ, ಚರ್ಮ ಕಾಂತಿಯುತವಾಗುವುದಲ್ಲದೆ ಮುಖದ ಮೇಲಿನ ಕಲೆಗಳು ಕೂಡ ಕಡಿಮೆಯಾಗುತ್ತವೆ. ದಾಳಿಂಬೆ ಸಿಪ್ಪೆಯಿಂದ ತಯಾರಿಸಿದ ಸ್ಕ್ರಬ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಮೇಲಿನ ಸತ್ತ ಕೋಶಗಳು ನಿವಾರಣೆಯಾಗುತ್ತದೆ.
ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳಲು ಈ ಸತ್ತ ಕೋಶಗಳೇ ಕಾರಣ. ಹಾಗಾಗಿ ಅವುಗಳನ್ನು ಸರಿಯಾಗಿ ತೆಗೆದು ಹಾಕಿದರೆ, ಚರ್ಮವು ತಾಜಾತನದಿಂದ ಹೊಳೆಯುತ್ತದೆ. ಅದಕ್ಕಾಗಿಯೇ ದಾಳಿಂಬೆ ಸಿಪ್ಪೆಯನ್ನು ಸರಿಯಾಗಿ ಬಳಸಿದರೆ, ಚರ್ಮವು ಮೃದು ಮತ್ತು ಕಾಂತಿಯುತವಾಗಿಸುತ್ತದೆ.
ನಮ್ಮ ಚರ್ಮದ ಆರೋಗ್ಯದ ಜೊತೆಗೆ ಮುಖದ ಕಾಂತಿ ಹೆಚ್ಚಿಸಲು, ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಸಂಜೆಯ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಂಡು ಅದನ್ನು ಮೃದುವಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯ ಬಳಕೆಯು ಮುಖಕ್ಕೆ ಒಳ್ಳೆಯ ಫಲಿತಾಂಶ ನೀಡುವುದಲ್ಲದೆ ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡು ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.
ದಾಳಿಂಬೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಒಂದು ಚಮಚ ಸಕ್ಕರೆ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಆವಕಾಡೊ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮೂರು ಪದಾರ್ಥಗಳನ್ನು ಒಟ್ಟುಗೂಡಿಸಿದಾಗ ಒಳ್ಳೆಯ ಸ್ಕ್ರಬ್ ತಯಾರಾಗುತ್ತದೆ. ಈ ಮಿಶ್ರಣವನ್ನು ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಚರ್ಮವು ಕಾಂತಿಯುತವಾಗುತ್ತದೆ.
ಸ್ಕ್ರಬ್ ಹಚ್ಚುವ ಮೊದಲು, ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಈ ಸ್ಕ್ರಬ್ ಅನ್ನು ಮುಖದ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ನಿಮ್ಮ ಕೈಗಳಿಂದ ಮಸಾಜ್ ಮಾಡಿ ಮತ್ತು ಚರ್ಮಕ್ಕೆ ನಿಧಾನವಾಗಿ ಹಚ್ಚಿರಿ. ಮಸಾಜ್ ಮಾಡಿ 10- 15 ನಿಮಿಷಗಳ ಕಾಲ ಬಿಡಿ ಬಳಿಕ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮ ಮೃದುವಾಗುವುದಲ್ಲದೆ ಕಾಂತಿಯುತವಾಗುತ್ತದೆ.

