ಆಲೂಗಡ್ಡೆ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಆರೋಗ್ಯಕರ ಎಂದು ನಂಬಲಾಗಿದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದು ಹಲವಾರು ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ.
ಆಲೂಗಡ್ಡೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ನಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದರೆ ಇವುಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಹೆಚ್ಚು ಆಲೂ ಅಥವಾ ಬಟಾಟೆ ತಿನ್ನುವುದರಿಂದ ದೇಹದಲ್ಲಿ ನೋವಿನ ಜೊತೆಗೆ ಕಾಲು ನೋವು ಕೂಡ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಮಧುಮೇಹ ಇರುವವರು ಆಲೂಗಡ್ಡೆ ತಿನ್ನದಿರುವುದು ಉತ್ತಮ. ಏಕೆಂದರೆ ಆಲೂಗಡ್ಡೆಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶದಿಂದಾಗಿ, ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಮಧುಮೇಹ ಹೊಂದಿರುವವರು ಆಲೂಗಡ್ಡೆ ತಿನ್ನದಂತೆ ಸಲಹೆ ನೀಡಲಾಗುತ್ತದೆ.
ಆಲೂ ಅತಿಯಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಆಲೂಗಡ್ಡೆಯಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ. ಇವುಗಳನ್ನು ಪದೇ ಪದೇ ಸೇವನೆ ಮಾಡುವುದು ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ವಿಶೇಷವಾಗಿ ಹುರಿದು ಅಥವಾ ಚೀಸ್ ಮತ್ತು ಇತರ ಪದಾರ್ಥಗಳ ಜೊತೆಗೆ ಸೇವನೆ ಮಾಡಿದರೆ ತೂಕ ಹೆಚ್ಚಾಗುವ ಅಪಾಯ ಹೆಚ್ಚಾಗಿರುತ್ತದೆ.
ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್ ಹೆಚ್ಚಾಗಲು ಕಾರಣವಾಗಬಹುದು. ಜೊತೆಗೆ ಇದರ ಅತಿಯಾದ ಸೇವನೆ ಪೌಷ್ಠಿಕಾಂಶದ ಅಸಮತೋಲನಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಹುರಿದು ಅಥವಾ ಅದರಿಂದ ಮಾಡಿದ ಚಿಪ್ಸ್ ತಿನ್ನುವುದು ಒಳ್ಳೆಯದಲ್ಲ. ಇವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಜೊತೆಗೆ ಮಧುಮೇಹ ಮತ್ತು ಬಿಪಿಯಂತಹ ಆರೋಗ್ಯ ಸಮಸ್ಯೆ ಇರುವವರು ಆಲೂಗಡ್ಡೆಯನ್ನು ತಿನ್ನದಿರುವುದು ಬಹಳ ಒಳ್ಳೆಯದು. ಅಲ್ಲದೆ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗಿರುವವರು ಕೂಡ ಆಲೂಗಡ್ಡೆಯಿಂದ ದೂರವಿರುವುದು ಒಳ್ಳೆಯದು.

