ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ದೇಹದ ದಾಹವನ್ನು ತಣಿಸಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗಿದ್ದು, ಇದನ್ನು ಅಡುಗೆ ಅಥವಾ ಹಸಿಯಾಗಿ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಉಷ್ಣಾಂಶ ತಗ್ಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಸೌತೆಕಾಯಿಯಲ್ಲಿ ಹಲವು ಬಗೆಗಳಿದ್ದು, ಅವುಗಳಲ್ಲಿ ಔಷಧೀಯ ಗುಣಗಳು ಹೆಚ್ಚಿನ ಪ್ರಮಾಣದಲ್ಲಿದೆ. ಇದು ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇದರ ರಸವನ್ನು ತೆಗೆದು ಮುಖ ಕೈಕಾಲು, ಚರ್ಮಕ್ಕೆ ಹಚ್ಚಿ ಕೆಲವು ಸಮಯ ಬಿಟ್ಟು ತೊಳೆಯುವುದರಿಂದ ಚರ್ಮದ ಸುಕ್ಕು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
ಅಜೀರ್ಣ ಸಮಸ್ಯೆಯಿಂದ ಬಳಲುವವರು ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಬಹುದು. ಕೆಲವೊಮ್ಮೆ ಅಂಗಾಲುಗಳಲ್ಲಿ ಉರಿ ಕಾಣಿಸಿಕೊಂಡರೆ ಸೌತೆಕಾಯಿಯ ತಿರುಳು ತೆಗೆದು ಅದರಿಂದ ಉಜ್ಜಿದರೆ ಶಮನವಾಗುತ್ತದೆ.
ದೇಹದ ಉಷ್ಣದ ಕಾರಣಕ್ಕೆ ಮೂತ್ರ ಸಮರ್ಪಕವಾಗಿ ಹೋಗದೆ ತೊಂದರೆ ಅನುಭವಿಸುವವರು ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ.
ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಇದಲ್ಲದೆ ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲೀಶ್ ಮಾಡಿದರೆ ದೇಹ ತಂಪಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ. ಸೌತೆಕಾಯಿಯನ್ನು ಚಕ್ರದಾಕಾರವಾಗಿ ಕತ್ತರಿಸಿ ಕಣ್ಣಿಗೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

