ನಮ್ಮ ದೇಹಕ್ಕೆ ಬೇಕಾಗುವ ಖನಿಜಾಂಶಗಳ ಪೈಕಿ ಸೋಡಿಯಂ ಕೂಡಾ ಒಂದು. ಸೋಡಿಯಂ ನಾವು ನಿತ್ಯವೂ ಸೇವಿಸುವ ಉಪ್ಪಿನ ಮೂಲಕ ನಮಗೆ ಲಭ್ಯವಾಗುತ್ತದೆ. ಈ ಖನಿಜಾಂಶ ಹೆಚ್ಚಾದರೂ ಸಮಸ್ಯೆಯೇ. ಕಡಿಮೆಯಾದರೂ ಸಮಸ್ಯೆಯೇ. ಇವುಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ದೇಹ ಅದನ್ನು ನಮಗೆ ತೋರಿಸುತ್ತದೆ.

ಸೋಡಿಯಂ ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಮುಖ್ಯವಾದ ಎಲೆಕ್ಟ್ರೋಲೈಟ್.‌ ಇದು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ.ದು ನಮ್ಮ ದೇಹದಲ್ಲಿ ತಾನೇ ತಾನಾಗಿ ಉತ್ಪತ್ತಿಯಾಗುವುದಿಲ್ಲ. ಮೊಟ್ಟೆ, ಮಾಂಸ, ಹಾಲು ಇತ್ಯಾದಿಗಳ ಮೂಲಕ ದೇಹಕ್ಕೆ ಸೋಡಿಯಂ ಲಭ್ಯವಾದರೂ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಮಗೆ ಸೋಡಿಯಂ ಸಿಗುವುದು ನಿತ್ಯವೂ ಆಹಾರದ ಮೂಲಕ ನಾವು ಸೇವಿಸುವ ಉಪ್ಪಿನ ಮೂಲಕ.

ಸೋಡಿಯಂ ಕ್ಲೋರೈಡ್‌ ಆಗಿರುವ ಉಪ್ಪಿನಲ್ಲಿ ಶೇಕಡಾ ೪೦ರಷ್ಟು ಸೋಡಿಯಂ ಹಾಗೂ ಶೇಕಡಾ 60ರಷ್ಟು ಕ್ಲೋರೈಡ್‌ ಇದೆ. ಅತಿಯಾದ ಉಪ್ಪಿನ ಸೇವನೆ ಸಮಸ್ಯೆಗಳನ್ನು ತಂದೊಡ್ಡುವುದು ನಿಜವೇ ಆದರೂ, ಉಪ್ಪು ದೇಹಕ್ಕೆ ಕಡಿಮೆಯೂ ಆಗಬಾರದು. ಇದು ಕಡಿಮೆಯಾದರೆ, ಮಾನಿಸಕ ಒತ್ತಡ, ಖಿನ್ನತೆ, ಸುಸ್ತು, ವಾಂತಿ, ತಲೆನೋವು, ಗೊಂದಲ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ದೇಹದಲ್ಲಿ ಸೋಡಿಯಂ ಕಡಿಮೆಯಾದಾಗ ಕಾಣುವ ಲಕ್ಷಣಗಳಲ್ಲಿ ಪ್ರಮುಖವಾದದ್ದು ಇದು. ತಲೆನೋವು ಪದೇ ಪದೇ ಕಾಡುತ್ತಿದ್ದರೆ, ನಿಮ್ಮ ಸೋಡಿಯಂ ಮಟ್ಟ ಸರಿಯಾಗಿದೆಯೇ ಎಂಬುದನ್ನೂ ನೀವು ಪರಿಗಣಿಸಬೇಕು. ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾದಾಗ ದೇಹದಲ್ಲಿರುವ ನೀರಿನ ಮಟ್ಟದಲ್ಲೂ ಏರುಪೇರಾಗುತ್ತದೆ. ಇದರಿಂದ ತಲೆಸುತ್ತು, ವಾಂತಿಯೂ ಸಾಮಾನ್ಯ.

ನಮ್ಮ ನರಮಂಡಲ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಸೋಡಿಯಂ ಬೇಕೇ ಬೇಕು. ಇದು ಸರಿಯಾದ ಮಟ್ಟದಲ್ಲಿದ್ದರೆ ನರಮಂಡಲ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಸೋಡಿಯಂ ಮಟ್ಟ ಕಡಿಮೆಯಾದಾಗ, ಮಿದುಳಿಗೆ ನರಮಂಡಲ ಸರಿಯಾದ ಸಂದೇಶಗಳನ್ನು ಕಳುಹಿಸಲು ಅಸಮರ್ಥವಾಗಿ ಹೀಗೆ ಗೊಂದಲಗಳನ್ನು ಹುಟ್ಟುಹಾಕುತ್ತದೆ.

ಸೋಡಿಯಂ ಮಟ್ಟ ದೇಹದಲ್ಲಿ ಕಡಿಮೆಯಾದಾಗ, ದೇಹದಿಂದ ಬೇಡವಾದ ಕಶ್ಮಲಗಳೂ ಹೊರಹೋಗುವುದು ಕಡಿಮೆಯಾಗುತ್ತದೆ. ಇದರಿಂದ ಈ ಕಶ್ಮಲಗಳು ದೇಹದಲ್ಲಿ ಮಾಂಸಖಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೋವು, ಸೆಳೆತ ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ. ಸೋಡಿಯಂ ದೇಹದಲ್ಲಿ ಕಡಿಮೆಯಾದಾಗ, ರಕ್ತವು ದೇಹದ ಅಂಗಾಂಗಗಳಿಗೆ ಪೋಷಕಾಂಶಗಳನ್ನು ಹಂಚುವಿಕೆಯ ಕೆಲಸವನ್ನೂ ನಿಧಾನ ಮಾಡುತ್ತದೆ. ಇದರಿಂದ ಪೋಷಕಾಂಶಗಳು ಸರಿಯಾಗಿ ತಲುಪದೆ, ಶಕ್ತಿಹೀನತೆ ಬರುತ್ತದೆ. ಸುಸ್ತು, ನಿಶಃಕ್ತಿ ಕಾಡುತ್ತದೆ.