ಬಸಳೆ ಸೊಪ್ಪು ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಬಸಳೆ ಸೊಪ್ಪು ತನ್ನಲ್ಲಿರುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳಿಂದ ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಬಗೆಯಲ್ಲಿ ಸಹಕಾರಿ ಎಂದು ತಿಳಿದು ಬಂದಿದೆ. ಬೇರೆಲ್ಲಾ ಹಸಿರು ಎಲೆ ತರಕಾರಿಗಳನ್ನು ಮೀರಿಸುವಂತಹ ಸತ್ವಗಳು ಬಸಳೆ ಸೊಪ್ಪಿನಲ್ಲಿ ಅಡಗಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ವಿಟಮಿನ್ ‘ ಎ ‘, ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ9 ‘, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಷಿಯಂ, ಪೋಸ್ಫ್ಯಾರಸ್, ಪೊಟ್ಯಾಸಿಯಂ ಮತ್ತು ಇನ್ನಿತರ ಖನಿಜಾಂಶಗಳು ಸೇರಿವೆ. ಜೊತೆಗೆ ಲ್ಯೂಟೀನ್ ಮತ್ತು ಬೀಟಾ – ಕೆರೋಟಿನ್ ಎಂಬ ಎರಡು ಆಂಟಿ – ಓಕ್ಸಿಡೆಂಟ್ ಗಳು ಸಹ ಇವೆ.
ಬಸಳೆ ಸೊಪ್ಪಿನಲ್ಲಿ ಫೋಲೇಟ್ ಅಂಶ ಅಧಿಕವಾಗಿದೆ. ಇದು ಸಾಮಾನ್ಯವಾಗಿ ರಕ್ತದಲ್ಲಿನ ಹಿಮೋಸಿಸ್ಟಿನ್ ಮಟ್ಟವನ್ನು ತಗ್ಗಿಸುತ್ತದೆ. ಮನುಷ್ಯನಲ್ಲಿ ಹೀಮೋಸಿಸ್ಟಿನ್ ಹಾರ್ಟ್ ಅಟ್ಯಾಕ್ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುವ ಅಂಶ.
ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ಹಿಮೋ ಸಿಸ್ಟಿನ್ ಅಂಶವನ್ನು ಮೆಥಿಯೋನಿನ್ ಅಂಶವನ್ನಾಗಿ ಪರಿವರ್ತಿಸುವುದರಿಂದ ದೇಹದ ಮೆಟಬಾಲಿಕ್ ಪ್ರಕ್ರಿಯೆಗಳಿಗೆ ಮತ್ತು ಆಂಟಿ – ಆಕ್ಸಿಡೆಂಟ್ ಕಾರ್ಯ ಚಟುವಟಿಕೆಗಳಿಗೆ ಬಹಳಷ್ಟು ಸೂಕ್ತವಾಗುತ್ತದೆ. ಸಂಶೋಧನೆಗಳು ಸಹ ಫೋಲೇಟ್ ಅಂಶವನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯ ರಕ್ತನಾಳದ ಸಮಸ್ಯೆಗಳನ್ನು ದೂರವಿಡಬಹುದು ಎಂದು ಹೇಳಿವೆ.
ಬಸಳೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರತಿ ದಿನದ ಕೆಲವು ಕ್ಲಿಷ್ಟಕರ ಅನುಭವಗಳಿಂದ ಉಂಟಾಗುವ ಮಾನಸಿಕ ಖಿನ್ನತೆ ಮತ್ತು ಆತಂಕ ಯಾವುದೇ ಔಷಧಿಗಳಿಲ್ಲದೆ ದೂರವಾಗಬಲ್ಲದು. ಇದಕ್ಕೂ ಕಾರಣ ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ಎಂದರೆ ತಪ್ಪಾಗಲಾರದು.
ಈಗಾಗಲೇ ಮಾನಸಿಕ ಖಿನ್ನತೆಗೆ ಒಳಗಾಗಿ ಸಮಾಜದಿಂದ ದೂರವಿರಲು ಬಯಸುವ ಜನರಿಗೆ ಬಸಳೆ ಸೊಪ್ಪು ತನ್ನೊಳಗಿನ ಈ ಅಂಶದಿಂದ ಅವರಲ್ಲಿ ಮತ್ತೊಮ್ಮೆ ಹೊಸ ಹುರುಪು ನೀಡಿ ಮಾನಸಿಕ ಚೈತನ್ಯ ಒದಗಿಸಿ ಮಾನಸಿಕ ಆರೋಗ್ಯವನ್ನು ಸರಿಪಡಿಸುತ್ತದೆ.
ಬಸಳೆ ಸೊಪ್ಪು ಒಂದು ಹಸಿರೆಲೆ ತರಕಾರಿ ಗುಂಪಿಗೆ ಸೇರಿದ ನೈಸರ್ಗಿಕ ಆಹಾರ ಪದಾರ್ಥ ಆಗಿರುವುದರಿಂದ ಮನುಷ್ಯನ ದೇಹಕ್ಕೆ ಇದರಿಂದ ಹಲವಾರು ಲಾಭಗಳಿವೆ. ನಿಸರ್ಗದತ್ತವಾಗಿ ಇದರಲ್ಲಿ ಬಂದ ಹಲವಾರು ವಿಟಮಿನ್ ಅಂಶಗಳು ಮನುಷ್ಯನ ದೇಹಕ್ಕೆ ಹಲವು ಬಗೆಯ ಜೀವಕ್ಕೇ ಮಾರಕವಾಗಿರುವ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಬಹುದು.
ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ದೇಹದಲ್ಲಿ ಆಹಾರ ಸೇವನೆ ಮಾಡಿದಾಗ ಲಭ್ಯವಾಗುವ ವಿಟಮಿನ್ ‘ ಬಿ12 ‘ ಅಂಶವನ್ನು ಸರಿಯಾಗಿ ಹೀರಿಕೊಳ್ಳುವಂತೆ ಮಾಡಿ ಅಮೈನೋ ಆಮ್ಲಗಳನ್ನು ಒದಗಿಸುವ ಮೂಲಕ ಮೆದುಳಿನ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ.
ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ದೇಹದಲ್ಲಿ ಕಡಿಮೆ ಪ್ರಮಾಣದ ಹಿಮೋಗ್ಲೋಬಿನ್ ಉಂಟಾಗಿ ಸರಿಯಾದ ಪ್ರಮಾಣದ ಆಮ್ಲಜನಕ ದೇಹದ ಎಲ್ಲಾ ಕೋಶಗಳಿಗೆ ಪೂರೈಕೆ ಆಗಲು ಸಾಧ್ಯವಾಗುವುದಿಲ್ಲ. ಇದರಿಂದ ಮಾನಸಿಕ ತೊಂದರೆ ದೇಹದಲ್ಲಿ ನಿಶ್ಯಕ್ತಿ ಸಮಸ್ಯೆಗಳು ಹೆಚ್ಚಾಗುತ್ತವೆ. ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ತೊಂದರೆ ಕಾಣಿಸುವ ಸಾಧ್ಯತೆ ಇರುತ್ತದೆ. ಆದರೆ ಹಿರಿಯರು ಹೇಳುವಂತೆ ಬಸಳೆ ಸೊಪ್ಪಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗುತ್ತದೆ.

